Karwar| ‘ ನಡೆ ಮುಂದೆ ನಡೆ ಮುಂದೆ, ನುಗ್ಗಿ ನಡೆ ಮುಂದೆ! ಎಂಬ ಖ್ಯಾತ ಕವಿ ಕುವೆಂಪು ಅವರ ಕವಿತೆಯಿಂದ ಅಕ್ಷರಶಃ ಸ್ಪೂರ್ತಿ ಪಡೆದಂತಿರುವ ಇಲ್ಲಿನ ನಗರಸಭೆ, ಯಾರ ಮಾತಿಗೂ, ಯಾರ ಹೋರಾಟಕ್ಕೂ ಕುಗ್ಗದೇ, ಬಗ್ಗದೇ, ಜಗ್ಗದೇ ಮತ್ತೆ ಬಸ್ ಸ್ಟಾಪ್ ನಿರ್ಮಾಣ ಕಾರ್ಯ ಆರಂಭಿಸಿದೆ.

ಹಿಂದೂ ಹೈಸ್ಕೂಲ್ ಬಳಿಯ ಪುಟಪಾತ್ ಮೇಲಿನ ಬಸ್ ಸ್ಟಾಪ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರ ಆಕ್ಷೇಪಕ್ಕೆ ನಗರಸಭೆ ಕೆಲ ದಿನ ಮೌನವಾಗಿತ್ತು. ಕೆಲವರಂತೂ ನಮ್ಮ ನಗರಸಭೆಯವರು ಎಮ್ಮೆ ಚರ್ಮದವರಲ್ಲ, ಅವರಿಗೂ ಕಣ್ಣು, ಕಿವಿ ಇದೆ. ಶಾಲಾ ಮಕ್ಕಳ ಹಾಗೂ ಸಾರ್ವಜನಿಕರ ಕಾಳಜಿಯನ್ನು ಅರ್ಥ ಮಾಡಿಕೊಂಡು ಪುಟಪಾತ್ ನಿರ್ಮಾಣ ಕೈಬಿಟ್ಟರು ಎಂದು ಬಿಗಿದ್ದರು.
ಆದರೆ ನಗರಸಭೆಯವರು ಮಾತ್ರ ‘ಹೋದೆಯಾ ಪಿಶಾಚಿ ಎಂದರೇ ಬಂದೇ ಗವಾಕ್ಷೀಲಿ’ ಎಂಬಂತೆ, ಈ ಮೊದಲು ನಿರ್ಮಿಸಲಾಗುತ್ತಿದ್ದ ಬಸ್ ಸ್ಟಾಪ್‌ನ ಬರೋಬ್ಬರಿ ಎರಡು ಹೆಜ್ಜೆ ಹಿಂದೆ ಸರಿದು, ಬಾಯಿ ಕುಂವರ್‌ಬಾಯಿ ಶಾಲೆಯ ಆಟದ ಮೈದಾನದಲ್ಲಿ ನೂತನ ಬಸ್ ಸ್ಟಾಪ್ ನಿರ್ಮಾಣ ಕಾರ್ಯ ಆರಂಭಿಸಿದ್ದಾರೆ. ಸತತ ಮೂರು ದಿನಗಳ ಸರ್ಕಾರಿ ರಜಾ ಅವಧಿಯನ್ನು ಬಸ್ ಸ್ಟಾಪ್ ನಿರ್ಮಾಣಕ್ಕೆ ಆಯ್ಕೆ ಮಾಡಿಕೊಂಡಿರುವುದು ವಿಶೇಷ. ಪಾಲಕರು, ಸಾರ್ವಜನಿಕರು ಅತ್ತ ಕಡೆ ಸುಳಿಯದಂತೆ ರಜೆ ಅವಧಿಯಲ್ಲಿ ಲಗು ಬಗೆಯಲ್ಲಿ ಬಸ್ ಸ್ಟಾಪ್ ನಿರ್ಮಾಣ ನಡೆಸಲಾಗುತ್ತಿದೆ.
ಫೀಲ್ಡೀಗಿಳಿದಿದ್ದ ಮಾಜಿ ಶಾಸಕಿ: ಪುಟಪಾತ್ ಮೇಲೆ ಬಸ್ ಸ್ಟಾಪ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮಾಜಿ ಶಾಸಕಿ ರೂಪಾಲಿ ನಾಯ್ಕ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಬಸ್ ಸ್ಟಾಪ್ ಬಳಿ, ಸಾರ್ವಜನಿಕರ ಎದುರೇ ನಗರಸಭೆ ಆಯುಕ್ತರನ್ನು ಸ್ಥಳಕ್ಕೆ ಕರೆಯಿಸಿ ಬೆವರಿಳಿಸಿದ್ದರು. ಶಾಸಕ ಸತೀಶ ಸೈಲ್ ಮೂರು ಎಕರೆ ಜಮೀನಿಗೆ ರಸ್ತೆ ಮಾಡಿಕೊಡುವ ಉದ್ದೇಶದಿಂದ, ಹಳೆಯ ಬಸ್‌ಸ್ಟಾಪ್ ಸ್ಥಳಾಂತರಿಸಿ, ಪುಟ್ ಪಾತ್ ಮೇಲೆ ನಿರ್ಮಿಸಲಾಗುತ್ತಿದೆ ಎಂದು ಆರೋಪಿಸಿದ್ದರು. ಆರಾಮ ಇಲ್ಲ ಎಂದು ನ್ಯಾಯಾಲಯದಿಂದ ಜಾಮೀನು ಪಡೆದು ಹೊರಬಂದಿದ್ದಾರೆ. ಮನೆಯಲ್ಲೇ ಆರಾಮ ಇರಬೇಕು. ಅದು ಬಿಟ್ಟು ಇಂಥ ಕಿತಾಪತಿ ಮಾಡದಂತೆ ಕಿವಿಮಾತು ಹೇಳಿದ್ದರು. ನಗರಸಭೆ ಆಯುಕ್ತರಿಗೂ ನೀವು ಚೆನ್ನಾಗಿ ಕೆಲಸ ಮಾಡ್ತಾ ಇದ್ದೀರಿ, ನಮ್ಮ ಸರ್ಕಾರ ಬಂದಾಗ ತಮ್ಮನ್ನೆ ಹುದ್ದೆಯಲ್ಲಿ ಮುಂದುವರೆಸುವ ಭರವಸೆ ನೀಡಿ, ಬಸ್ ಸ್ಟಾಪ್ ನಿರ್ಮಾಣ ಕೈಬಿಡಲು ಸೂಚಿಸಿದ್ರು.
ಮೂರು ಎಕ್ರೆ ಅಲ್ಲ; ಶಾಸಕ ಸೈಲ್ ಅವರ ಮೂರು ಎಕ್ರೆ ಜಮೀನಿದೆ ಎಂಬ ಮಾಜಿ ಶಾಸಕಿ ರೂಪಾಲಿ ನಾಯ್ಕ ಆರೋಪಕ್ಕೆ ತಿರುಗೇಟು ನೀಡಿದ್ದ ಕಾಂಗ್ರೆಸ್ ಪ್ರಮುಖ ಶಂಭು ಶೆಟ್ಟಿ, ಸೈಲ್ ಅವರದ್ದು ಮೂರು ಎಕ್ರೆ ಅಲ್ಲ. ಕೇವಲ ಮೂವತ್ತು ಗುಂಟೆ ಮತ್ತೆ ಎರಡು ಗುಂಟೆ ಒಟ್ಟು 32 ಗುಂಟೆ ಜಮೀನಷ್ಟೆ ಇದೆ. ಇನ್ನು ಸೈಲ್ ಸುಮಾರು ಏಳು ನೂರರಿಂದ ಎಂಟು ನೂರು ಕೋಟಿ ವಹಿವಾಟು ನಡೆಸುವ ದೊಡ್ಡ ಉದ್ದಿಮೆ. ಅವರು ತಮ್ಮ ಪರಿಶ್ರಮದಿಂದ ಖರೀದಿಸಿದ ಜಾಗ ಅದು. ಈ ಜಾಗಕ್ಕೆ ತೆರಳಲು ರಸ್ತೆ ಇದೆ ಎಂದು ಮಾಜಿ ಶಾಸಕಿಯವರ ಆರೋಪವನ್ನು ತಳ್ಳಿಹಾಕಿದ್ದನ್ನು ಇಲ್ಲಿ ಸ್ಮರಿಸಬಹುದು.
ಒಟ್ಟಾರೆ, ಪುಟಪಾತ್ ವಿಚಾರದಲ್ಲಿ ಈಗ ಎರಡು ಹೆಜ್ಜೆ ಹಿಂದೆ ಸರಿದು ಬಾಯಿ ಕುಂವರಬಾಯಿ ಶಾಲಾ ಆವರಣದಲ್ಲಿ ಅದನ್ನು ನಿರ್ಮಿಸಲು ನಗರಸಭೆಯು ಮುಂದಾಗುತ್ತಿದ್ದು, ಶಾಲೆಯ ಆಡಳಿತ ಮಂಡಳಿ, ಪಾಲಕರು ಹಾಗೂ ಮಾಜಿ ಶಾಸಕಿ ರೂಪಾಲಿ ನಾಯ್ಕ ಅವರ ಮುಂದಿನ ನಡೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ಕುತೂಹಲ ಮೂಡಿಸಿದೆ.
