Karwar | ವರ್ಷದಲ್ಲಿ ಕೇವಲ ಏಳು ದಿನಗಳ ಕಾಲ ಮಾತ್ರ ದೇವಸ್ಥಾನದ ಬಾಗಿಲು ತೆರೆದು ಭಕ್ತರಿಗೆ ದರ್ಶನ ನೀಡುವ ವಿಶಿಷ್ಟ ಪರಂಪರೆಯುಳ್ಳ ಹಣಕೋಣದ ಪ್ರಸಿದ್ಧ ಸಾತೇರಿ ದೇವಿಯ ಜಾತ್ರಾ ಮಹೋತ್ಸವ  ಸೆಪ್ಟೆಂಬರ್ 18ರಿಂದ ಆರಂಭವಾಗಲಿದೆ.

ಭಕ್ತರ ಅಪಾರ ನಂಬಿಕೆಯ ಕೇಂದ್ರವಾಗಿರುವ ಹಣಕೋಣ ಸಾತೇರಿ ದೇವಿಯ ದರ್ಶನಕ್ಕಾಗಿ ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಆಗಮಿಸುತ್ತಾರೆ. ಜಾತ್ರೆಯ ಅಂಗವಾಗಿ ದೇವಿಯ ದರ್ಶನಕ್ಕೆ ನಿಗದಿತ ದಿನಗಳಲ್ಲಿ ಮಾತ್ರ ಅವಕಾಶ ನೀಡಲಾಗುತ್ತದೆ.

ಸೆಪ್ಟೆಂಬರ್ 18ರಂದು ಶುಕ್ರವಾರ ಮಧ್ಯರಾತ್ರಿ 12 ಗಂಟೆಗೆ ದೇವಾಲಯದ ಬಾಗಿಲು ತೆರೆಯಲಾಗುವುದು. ಈ ವೇಳೆ ದೇವಿಗೆ ವಿಶೇಷ ಪೂಜೆ ನೆರವೇರಿಸಿ ನಯೆ ಅರ್ಪಣೆ ಮಾಡಲಾಗುತ್ತದೆ. ಬಳಿಕ ಜಾತ್ರೆಯ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಳ್ಳಲಿವೆ.

ಸೆ.19ರಂದು ಶನಿವಾರ ಕುಳಾವಿ ಜನರ ಅಡಕಿ ಹಾಗೂ ತಳಯಿ ಕುಲದೇವಿಗೆ ಸಮರ್ಪಣೆ ನಡೆಯಲಿದೆ. ಸೆ.20ರಿಂದ ಸೆ.23ರವರೆಗೆ ಪ್ರತಿದಿನ ಬೆಳಗ್ಗೆಯಿಂದ ಸಂಜೆವರೆಗೆ ಸಾರ್ವಜನಿಕರಿಗೆ ದೇವಿಯ ದರ್ಶನ ಹಾಗೂ ಉಡಿ ತುಂಬುವ ಸೇವೆಗೆ ಅವಕಾಶ ಕಲ್ಪಿಸಲಾಗುತ್ತದೆ.

ಜಾತ್ರೆಯ ಕೊನೆಯ ದಿನವಾದ ಸೆ.24ರಂದು ಗುರುವಾರ ಸಂಜೆ 5 ಗಂಟೆಯವರೆಗೆ ಮಾತ್ರ ಭಕ್ತರಿಗೆ ದರ್ಶನ ಮತ್ತು ಉಡಿ ತುಂಬುವ ಅವಕಾಶ ಇರಲಿದೆ. ಬಳಿಕ ಸಂಪ್ರದಾಯದಂತೆ ದೇವಾಲಯದ ಬಾಗಿಲು ಮುಚ್ಚಲಾಗುವುದು.

ವರ್ಷದಲ್ಲಿ ಕೆಲವೇ ದಿನಗಳ ಕಾಲ ದರ್ಶನ ನೀಡುವ ಈ ಅಪರೂಪದ ಸಂಪ್ರದಾಯದಿಂದ ಸಾತೇರಿ ದೇವಿಯ ಜಾತ್ರೆಗೆ ವಿಶೇಷ ಮಹತ್ವವಿದ್ದು, ಜಾತ್ರೆಯ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ದೇವಸ್ಥಾನ ಆಡಳಿತ ಮಂಡಳಿ ಹಾಗೂ ಸ್ಥಳೀಯರು ಭಕ್ತರ ಅನುಕೂಲಕ್ಕಾಗಿ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುತ್ತಿದ್ದಾರೆ.