Karwar | ಕರ್ನಾಟಕ ರಾಜ್ಯ ಛಾಯಾ ಚಿತ್ರಗ್ರಾಹಕರ ಸಂಘದಿಂದ ರಾಜ್ಯದ ಎಲ್ಲಾ ತಾಲೂಕು ಸಂಘಗಳಲ್ಲಿ ನೊಂದಣಿಯಾಗಿರುವ ಛಾಯಾಚಿತ್ರ ಗ್ರಾಹಕರು ನಿಧನ ಹೊಂದಿದ್ದಲ್ಲಿ ಅವರ ಕುಟುಂಬದ ಸದಸ್ಯರಿಗೆ ಒಂದು ಲಕ್ಷ ರೂಪಾಯಿ ನೀಡುವ ನೂತನ ಯೋಜನೆ ಜಾರಿಗೆ ತಂದಿದ್ದೇವೆ ಎಂದು ಕೆಪಿಎ ರಾಜ್ಯಾಧ್ಯಕ್ಷ ನಾಗೇಶ ಎಚ್. ಎಸ್ ಅವರು ಹೇಳಿದರು.

ಕಾರವಾರದ ಜಿಲ್ಲಾ ಪ್ರತಿಕಾಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ” ಕರ್ನಾಟಕ ರಾಜ್ಯ ಛಾಯಾ ಚಿತ್ರಗ್ರಾಹಕರ ಸಂಘ ಕಳೆದ ಅನೇಕ ವರ್ಷಗಳಿಂದ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜ್ಯದಲ್ಲಿರುವ ಸುಮಾರು ಎರಡುವರೆ ಲಕ್ಷ ಛಾಯಾಚಿತ್ರ ಗ್ರಾಹಕರನ್ನು ಒಂದೇ ಸೂರಿನಡಿ ಸಂಘಟಿಸಲು ಶ್ರಮವಹಿಸುತ್ತಿದ್ದೆ.

ಇಂದಿನ ತಂತ್ರಜ್ಞಾನ ಪೈಪೋಟಿ ಯುಗದಲ್ಲಿ ಛಾಯಾಚಿತ್ರ ಗ್ರಾಹಕರು ಸಂಕಷ್ಠದಲ್ಲಿದ್ದು ಅನೇಕ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಸಂಘ ಛಾಯಾಚಿತ್ರ ಗ್ರಾಹಕರ ಸಮಸ್ಯಯನ್ನು ಸರ್ಕಾರದ ಗಮನಕ್ಕೆ ತಂದಿದ್ದು ಆರಂಭಿಕವಾಗಿ ಕಾರ್ಮಿಕ ಇಲಾಖೆಯಲ್ಲಿ ಛಾಯಾಚಿತ್ರ ಗ್ರಾಹಕರನ್ನು ಗುರುತಿಸಿ ಸರ್ಕಾರಿ ಸೌಲಭ್ಯ ಕಲ್ಪಿಸುವ ವ್ಯವಸ್ತೆ ಮಾಡಲಾಗಿದೆ.

ಹೀಗೆ ಪ್ರತಿಯೊಂದು ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಛಾಯಾಚಿತ್ರ ಗ್ರಾಹಕರ ಸಮುದಾಯ ಸಂಘಟಿತರಾಗಬೇಕಾದ ಅನಿವಾರ್ಯತೆ ಇದೆ. ಆ ಹಿನ್ನೆಲೆಯಲ್ಲಿ ಉತ್ತರಕನ್ನಡ ಜಿಲ್ಲೆಯಲ್ಲಿರುವ ಎಲ್ಲಾ ಛಾಯಾಚಿತ್ರ ಗ್ರಾಹಕರು ಒಂದೇ ಸಂಘದಡಿ ಸದಸ್ಯತ್ವ ಪಡೆಯಬೇಕಾಗಿದೆ. ಹೀಗೆ ಸದಸ್ಯತ್ವ ಪಡೆಯುವ ಸದಸ್ಯರಿಗೆ ಸಂಘದಿಂದ ನೂತನವಾಗಿ “ಆಸರೆ” ಎಂಬ ಯೋಜನೆ ಜಾರಿಗೆ ತರಲಾಗಿದೆ. ಈ ಯೋಜನೆಯಿಂದ ಸದಸ್ಯತ್ವ ಪಡೆದ ಸದಸ್ಯರು ಒಂದೊಮ್ಮೆ ಮೃತಪಟ್ಟಲ್ಲಿ ಸಂಘದಿಂದ ಒಂದು ಲಕ್ಷ ರೂಪಾಯಿ ಆರ್ಥಿಕ ನೆರವು ನೀಡಲಾಗುವುದು ಎಂದರು.

ಆಸರೆ ಯೋಜನೆ ಆರಂಭಿಕ ಹಂತದಲ್ಲಿ ಕೇವಲ ಒಂದು ಲಕ್ಷ ಆರ್ಥಿಕ ನೆರವು ನಿಗದಿ ಮಾಡಿದ್ದು ಮುಂದಿನ ದಿನಗಳಲ್ಲಿ ಹತ್ತು ಲಕ್ಷದ ವರೆಗೆ ಆರ್ಥಿಕ ನೆರವು ನೀಡುವ ಯೋಚನೆ ಇದೆ. ಈ ಯೋಜನೆಗಾಗಿ 110 ರೂಪಾಯಿ ನಿಗದಿ ಮಾಡಿದ್ದು 10 ಲಕ್ಷ ಸದಸ್ಯರು ನೊಂದಣಿ ಮಾಡಿಕೊಂಡಿದ್ದಾರೆ. ಆಸಕ್ತ ಛಾಯಾಚಿತ್ರ ಗ್ರಾಹಕರು ಅಗಷ್ಟ್ 19 ರ ಒಳಗಾಗಿ ನೊಂದಣಿ ಮಾಡಿಕೊಳ್ಳಬಹುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕೆಪಿಎ ರಾಜ್ಯ ಉಪಾಧ್ಯಕ್ಷರಾದ ಲಕ್ಷ್ಮೀ ನಾಯಾರಣ ಭಟ್, ಜಿಲ್ಲಾಧ್ಯಕ್ಷರಾದ ಸುರೇಶ ಹೊನ್ನಾವರ, ಸಂತಾನ್ ಫರ್ನಾಂಡಿಸ್, ಲಕ್ಷ್ಮೀಶ ಭಂಡಾರಿ, ವಿನಾಯಕ ನಾಯ್ಕ, ಪ್ರಶಾಂತ ನಾಯ್ಕ ಸೇರಿದಂತೆ ಅನೇಕರು ಇದ್ದರು.