Kumta| ಆಹಾರ ಬೇಡಿದ ಅಲೆಮಾರಿ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋವರ್ಧನ ಹೊಟೆಲ್ ಮಾಲಿಕ ಹಾಗೂ ವಾಚಮನ್ ಇಬ್ಬರ ಮೇಲೆ ಕುಮಟಾ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ‌.

ಗೋವರ್ಧನ ಹೋಟೆಲ್ ಮಾಲಿಕ ಕುಮಟಾದ ಗಣೇಶ ನಾರಾಯಣ ನಾಯ್ಕ‌ ಹಾಗೂ ವಾಚಮನ್ ಗಣೇಶ ರಮೇಶ ಗುರಕಾ ಎಂಬಿಬ್ಬರ ಮೇಲೆ‌ ದೂರು ದಾಖಲಾಗಿದೆ.

ಈ ಬಗ್ಗೆ ದೂರು ದಾಖಲಿಸಿರುವ ಹಲ್ಲೆಗೀಡಾದ ಸೊರಬಾದ‌ ಜಡೆಯ ರಮೇಶ‌ ದ್ಯಾಮಣ್ಣ ಅಲೆಮಾರಿ‌ಯ ಪತ್ನಿ ದ್ಯಾಮವ್ವ ರಮೇಶ ಅಲೆಮಾರಿ, ತಾವು ಸೋಮವಾರ ಮಧ್ಯಾಹ್ನ 2.30 ರ ಸುಮಾರಿಗೆ ಕುಮಟಾ ಹೊಸ ಬಸ್ ನಿಲ್ದಾಣದ ಎದುರು ಇರುವ ಗೋವರ್ಧನ ಹೋಟೆಲ್ ಗೆ ಊಟಕ್ಕೆ ಹೋಗುತ್ತಿದ್ದಾಗ ಹೋಟೆಲ್ ಮಾಲಿಕ ಗಣೇಶ ನಾರಾಯಣ ನಾಯ್ಕ ಹಾಗೂ ಮತ್ತು ಹೋಟೆಲ್ ವಾಚಮನ್ ಗಣೇಶ ರಮೇಶ ಗುರಕಾ ಇವರಿಬ್ಬರು ಸೇರಿಕೊಂಡು ತಮ್ಮನ್ನು ಅಡ್ಡಗಟ್ಟಿ, ನಮ್ಮ ಹೋಟೆಲ್ ಗೆ ಊಟಕ್ಕೆ ಬರಬೇಡಿ ಅಂತ ಹೇಳಿ ಕೈಯಿಂದ ಹೊಡೆದು ದೂಡಿ ಹಾಕಿ ರಸ್ತೆಯ ಮೇಲೆ ಬಿಳುವಂತೆ ಮಾಡಿದ್ದಾರೆ. ಅಲ್ಲದೇ ಮತ್ತೆ ಹೋಟೆಲ್ ಹತ್ತಿರ ಬಂದರೆ ಕೊಲೆ ಮಾಡಿ ನಾಪತ್ತೆ ಮಾಡುವದಾಗಿ ಜೀವ ಬೆದರಿಕೆ ಹಾಕಿದ್ದಾರೆಂದು‌ ದೂರಿದ್ದಾರೆ.

ಹಲ್ಲೆಗೊಳಗಾದ ರಮೇಶ ಕುಮಟಾ ಸರ್ಕಾರಿ ಆಸ್ಪತ್ರೆಯಲ್ಲಿ‌ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಹಾರ ಬೇಡಿದ ಅಸಹಾಯಕ ಅಲೆಮಾರಿಯ ಮೇಲಿನ ಹಲ್ಲೆ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು. ವಾಚಮನ್ ಹಾಗೂ ಹೊಟೆಲ್ ಮಾಲಿಕನ ದರ್ಪ, ದೌರ್ಜನ್ಯದ ಬಗ್ಗೆ ಸಾರ್ವಜನಿಕ ವಲಯದಿಂದ‌ ಸಾಕಷ್ಟು ಆಕ್ರೋಶ ವ್ಯಕ್ತವಾಗಿದ್ದನ್ನು ಸ್ಮರಿಸಬಹುದು.

ಇನ್ನು ಪ್ರಕರಣ ‌ದಾಖಲಿಸಿಕೊಂಡಿರುವ ಕುಮಟಾ ಪೋಲಿಸರು ತನಿಖೆ ಕೈಗೊಂಡಿದ್ದಾರೆ.