Joida: ತಾಲೂಕಿನ ಚಾಪೋಲಿ ಕ್ರಾಸ್ ಬಳಿ ನಿನ್ನೆ ಗುರುವಾರ ಸಂಭವಿಸಿದ್ದ ಎರಡು ಸಾರಿಗೆ ಬಸ್ಗಳ ಮುಖಾಮುಖಿ ಡಿಕ್ಕಿ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಚಾಲಕ ಚಿಕಿತ್ಸೆ ಫಲಕಾರಿಯಾಗದೇ ಇಂದು ಶುಕ್ರವಾರ ಬೆಳಗ್ಗೆ ಸಾವನ್ನಪ್ಪಿದ್ದಾನೆ.

ಚಾಲಕ ರಾಜು ಬೋಜೆ ಎಂಬಾತನೇ ಸಾವನ್ನಪ್ಪಿದ ದುರ್ದೈವಿ. ಎರಡೂ ಸಾರಿಗೆ ವಾಹನಗಳ ಮುಖಾಮುಖಿ ಡಿಕ್ಕಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ರಾಜು ಬೋಜೆಯನ್ನು ಬೆಳಗಾವಿಯ ಕೆ.ಎಲ್.ಇ. ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಶುಕ್ರವಾರ ಮುಂಜಾನೆ ಸಾವನ್ನಪಿದ್ದಾನೆ.
ನಿನ್ನೆ ಗುರುವಾರ ಬೆಳಿಗ್ಗೆ ರಾಮನಗರ–ಜೋಯಿಡಾ ರಸ್ತೆಯ ಚಾಪೋಲಿ ಕ್ರಾಸ್ ಸಮೀಪ ಉಳವಿ–ಇಚಲಕರಂಜಿ ಹಾಗೂ ಬೆಳಗಾವಿ–ಅಂಕೋಲಾ ಕೆಎಸ್ಆರ್ಟಿಸಿ ಬಸ್ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿತ್ತು. ಅಪಘಾತದಲ್ಲಿ ಚಾಲಕ ಸೇರಿದಂತೆ 40ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದು, ವಿದ್ಯಾರ್ಥಿಗಳು ಮತ್ತು ಇತರ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು. ಗಾಯಾಳುಗಳನ್ನು ತಕ್ಷಣ ಜೋಯಿಡಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಚಾಲಕ ರಾಜು ಬೋಜೆ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಬೆಳಗಾವಿಯ ಕೆ.ಎಲ್.ಇ. ಆಸ್ಪತ್ರೆಗೆ ರವಾನಿಸಲಾಗಿತ್ತು.
