ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರ ಆಪ್ತ ಗೋಪಾಲಕೃಷ್ಣ ನಾಯಕ ಹತ್ಯೆ ಯತ್ನ ಪ್ರಕರಣದ ಆರೋಪಿಗಳನ್ನು ಇಂದು ಅಂಕೋಲಾ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ನ್ಯಾಯಾಲಯ ಆರೋಪಿಗಳನ್ನು ಹೆಚ್ಚಿನ ತನಿಖೆಗಾಗಿ ಐದು ದಿನ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದೆ.
ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿಯಾದ ಗೋಪಾಲ ಕೃಷ್ಣ ನಾಯಕ ಅವರನ್ನು ಹತ್ಯೆ ಮಾಡುವ ಉದ್ದೇಶದಿಂದ ನಿನ್ನೆ ಅಂಕೋಲಾದ ಕಣಕಣೇಶ್ವರ ದೇವಾಲಯದ ಬಳಿ ಆರು ಜನರ ತಂಡ ಹಲ್ಲೆ ನಡೆಸಿತ್ತು. ಕೊಲೆಯತ್ನ ವಿಫಲವಾಗುತಿದ್ದಂತೆ ಆರೋಪಿಗಳು ಅಂಕೋಲಾದ ಕಾರೊಂದನ್ನು ಬಾಡಿಗೆ ಪಡೆದು ಗೋವಾ ಪರಾರಿಯಾಗಲು ಯತ್ನಿಸಿದ್ದರು.
ಚುರುಕಿನ ಕಾರ್ಯಾಚರಣೆ ನಡೆಸಿದ ಪೊಲೀಸರು ಕಾರವಾರದ ಮಾಜಾಳಿ ಚೆಕ್ ಪೋಸ್ಟ್ ನಲ್ಲಿ ಪ್ರಕರಣದ ಆರೋಪಿಗಳಾದ ಜಾಕೀರ್, ನೈಜಲ್, ಸದ್ದಾಂ ಹಾಗೂ ಇರ್ಫಾನ್ ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.
ಬಂಧಿತರನ್ನು ಇಂದು ಕಾರವಾರದ ವೈದ್ಯಕೀಯ ವಿಜ್ಞಾನ ಸಂಸ್ಥೆ (ಜಿಲ್ಲಾ ಆಸ್ಪತ್ರೆ) ಯಲ್ಲಿ ವೈದ್ಯಕೀಯ ತಪಾಸಣೆ ನಡೆಸಿ, ಅಂಕೋಲಾದ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ಈ ಪ್ರಕರಣದ ಎರಡು ಆರೋಪಿಗಳು ತಲೆಮರೆಸಿ ಕೊಂಡಿದ್ದು, ಇನ್ನೂ ಈ ಹತ್ಯೆ ಸಂಚಿನ ಹಿಂದಿರುವ ವ್ಯಕ್ತಿಗಳನ್ನು ಪತ್ತೆಹಚ್ಚಲು ಹೆಚ್ಚಿನ ತನಿಖೆಗಾಗಿ ಪೊಲೀಸ್ ವಶಕ್ಕೆ ನೀಡಬೇಕೆಂದು ನ್ಯಾಯಾಲಯಕ್ಕೆ ಮನವಿ ಮಾಡಲಾಗಿತ್ತು.
ಪೊಲೀಸರ ಮನವಿ ಪುರಸ್ಕರಿಸಿದ ಅಂಕೋಲಾ ನ್ಯಾಯಾಲಯವು ಆರೋಪಿಗಳನ್ನು ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದೆ. ಗೋಪಾಲಕೃಷ್ಣ ನಾಯಕ ಅವರು ಮಣಿಪಾಲದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರ ಹೆಚ್ಚುವರಿ ತನಿಖೆಯಿಂದ ಈ ಪ್ರಕರಣದ ಸೂತ್ರದಾರು ಯಾರು ಎಂದು ಹೊರಬರಬೆಕಿದೆ.
