Karwar| ಮಾದಕ ವಸ್ತುಗಳ ಅಕ್ರಮ ಸಾಗಾಟ ಹಾಗೂ ಮಾರಾಟದಲ್ಲಿ ತೊಡಗಿದ್ದ ಆರೋಪದ ಮೇರೆಗೆ ಇಲ್ಲಿನ ಡ್ರಗ್ ಪೆಡ್ಲರ್ ನೊಬ್ಬನನ್ನು ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ರವಾನಿಸಲಾಗಿದೆ.
ಕಾರವಾರದ ಹಬ್ಬುವಾಡಾದ ಕುಂಠಿ ಮಹಾಮಾಯಿ ದೇವಸ್ಥಾನದ ಬಳಿಯ ನಿವಾಸಿ ಇಬ್ರಾಹಿಂ ದವಳಸಾಬ ಚೋಪದಾರ (22) ಎಂಬಾತನನ್ನೆ PIT NDPS ಕಾಯ್ದೆಯಡಿ ಬಂಧಿಸಿ, ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ರವಾನಿಸಲಾಗಿದೆ.
ಈತನ ಮೇಲೆ ಕಾರವಾರ ಶಹರ ಪೊಲೀಸ್ ಠಾಣೆಯಲ್ಲಿ 2022, 2024 ಹಾಗೂ 2025ರಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಐದು ಪ್ರಕರಣಗಳು ದಾಖಲಾಗಿದ್ದು, ಅಂಕೋಲಾ ಪೊಲೀಸ್ ಠಾಣೆ ಹಾಗೂ ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿಯೂ ಮಾದಕ ವಸ್ತು ಸಂಬಂಧಿತ ಪ್ರಕರಣಗಳು ದಾಖಲಾಗಿವೆ. ಅಲ್ಲದೇ ಕಾರವಾರ ಶಹರ ಪೊಲೀಸ್ ಠಾಣೆಯಲ್ಲಿ ಪ್ರತಿಬಂಧಕ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಪೊಲೀಸರ ಪ್ರಕಾರ, ಹಲವು ಪ್ರಕರಣಗಳು ದಾಖಲಾಗಿದ್ದರೂ ಸಹ ಆರೋಪಿಯು ಮಾದಕ ವಸ್ತುಗಳ ಅಕ್ರಮ ಚಟುವಟಿಕೆಗಳಲ್ಲಿ ಮುಂದುವರಿಸಿದ್ದ. ಜಾಮೀನು ಷರತ್ತುಗಳನ್ನು ಉಲ್ಲಂಘಿಸಿ ಮತ್ತೆ ಇಂತಹ ಕೃತ್ಯಗಳಲ್ಲಿ ತೊಡಗಿಕೊಂಡಿರುವ ಹಿನ್ನೆಲೆಯಲ್ಲಿ ಆತನ ಚಟುವಟಿಕೆಗಳನ್ನು ನಿಯಂತ್ರಿಸಲು PIT NDPS ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗಿದೆ.
ಕಾರವಾರ ಶಹರ ಪೊಲೀಸ್ ಠಾಣೆ ಹಾಗೂ ಕಾರವಾರ ಉಪವಿಭಾಗದ ಡಿಎಸ್‌ಪಿ ಅವರ ವರದಿ ಆಧಾರದ ಮೇಲೆ ಪೊಲೀಸ್ ಅಧೀಕ್ಷಕರು, ಉತ್ತರ ಕನ್ನಡ ಜಿಲ್ಲೆ ಅವರ ಮೂಲಕ ಪಶ್ಚಿಮ ವಲಯ ಪೊಲೀಸ್ ಮಹಾನಿರೀಕ್ಷಕರು, ಮಂಗಳೂರು ಅವರಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದರಂತೆ The Prevention of Illicit Traffic in Narcotic Drugs and Psychotropic Substances Act-1988ರ ಕಲಂ 3(1) ಅಡಿಯಲ್ಲಿ ಇಬ್ರಾಹಿಂ ಚೋಪದಾರನನ್ನು ಬಂಧನದಲ್ಲಿಡಲು ಆದೇಶಿಸಲಾಗಿದ್ದು, ಆದೇಶದಂತೆ ಆತನನ್ನು ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಒಪ್ಪಿಸಲಾಗಿದೆ.
