Bhatkal| ಹಿಂದುಗಳ ಧಾರ್ಮಿಕ ನಂಬಿಕೆಯ ದೇವರ ಹೊರೆ ಇಳಿಸುತ್ತಿದ್ದ ಮುರಿನಕಟ್ಟೆ ಮರು ನಿರ್ಮಾಣಕ್ಕೆ ಅಡ್ಡಿ ಮಾಡಿ ಗುಪ್ತಚರ ಇಲಾಖೆಯ ಅಧಿಕಾರಿ ಹಾಗೂ ಪೊಲೀಸ್ ಸಿಬ್ಬಂದಿಯನ್ನು ದೂಡಿ ಹಲ್ಲೆಗೆ ಯತ್ನಿಸಿದ ಮುಸ್ಲಿಮರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ.

ಭಟ್ಕಳದ ವೆಂಕಟಾಪುರದ ಜಾಗಟೆ ಕಟ್ಟೆಯಲ್ಲಿದ್ದ ಮುರಿನ ಕಟ್ಟೆಯನ್ನು ರಾಷ್ಟ್ರೀಯ ಹೆದ್ದಾರಿ ಅಗಲಿಕರಣ ಸಂದರ್ಭದಲ್ಲಿ ತೆರವು ಮಾಡಲಾಗಿತ್ತು. ಸಾಕಷ್ಟು ಸಮಯಗಳ ಕಾಲ ಕಾದು ಇದರ ಮರು ನಿರ್ಮಾಣವನ್ನು ರಾಷ್ಟ್ರೀಯ ಹೆದ್ದಾರಿ ಸುಪರ್ದಿಯಲ್ಲಿರುವ ಜಾಗದಲ್ಲೇ ಭಾನುವಾರ ಹಿಂದು ಸಂಘಟನೆಯವರು ಮಾಡಿದ್ದರು. ಈ ಸ್ಥಳದಲ್ಲಿ ಮನೆ ನಿರ್ಮಾಣಕ್ಕೆ ಮುಂದಾಗಿದ್ದ ಮುಸ್ಲಿಂ ಸಂಘಟನೆಯಿಂದ ಇದಕ್ಕೆ ಭಾರೀ ವಿರೋಧ ವ್ಯಕ್ತಪಡಿಸಿ,‌ ಕಟ್ಟೆಯನ್ನು ತೆರವು ಮಾಡಲು ಆಗ್ರಹಿಸಿದ್ದರು. ಏಕಾಏಕಿ ಜಮಾಯಿಸಿದ ಮುಸ್ಲಿಮರು
ಭಾನುವಾರ ಬೆಳಗ್ಗೆ ನಿರ್ಮಾಣ ಮಾಡಿದ್ದ ಮುರಿನಕಟ್ಟೆಯನ್ನು ಒಡೆದು ಹಾಕಿದ್ದರು.

ಈ ಸಂದರ್ಭದಲ್ಲಿ ಕರ್ತವ್ಯದಲ್ಲಿ ಇದ್ದ ಗುಪ್ತಚರ ಇಲಾಖೆಯ ಅಧಿಕಾರಿ ಹಾಗೂ ಪೊಲೀಸ್ ಸಿಬ್ಬಂದಿಯನ್ನು ದೂಡಿ ಮುಸ್ಲಿಂ ಸಮುದಾಯದ ಕೆಲವರು ಹಲ್ಲೆಗೆ ಯತ್ನಿಸಿದ್ದಾರೆ. ಈ ಹಿನ್ನೆಲೆ ಪರಿಸ್ಥಿತಿ ನಿಯಂತ್ರಿಸಲು ಪೋಲಿಸರು ಅವರ ಮೇಲೆ ಲಾಠಿ ಚಾರ್ಜ್ ಮಾಡಿದ್ದಾರೆ.

ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೋಲಿಸರು ಹೆಚ್ಚಿನ ಕೆಎಸ್‌ಆರ್‌ಪಿ ತುಕಡಿಯನ್ನು ಕರೆಯಿಸಿದ್ದು, ಸ್ಥಳದಲ್ಲಿ ಭಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ.

ಭಟ್ಕಳದಲ್ಲಿ ನಡೆದ ಭೀಕರ ದುರಂತದಲ್ಲಿ 11 ಜನರು ಸಾವನ್ನಪ್ಪಿದ ಘಟನೆ ಹಿನ್ನೆಲೆ ಇಡೀ ಜಿಲ್ಲೆಯೇ ಶೋಕತಪ್ತವಾಗಿದ್ದ ನಡುವೆ ಶಾಂತಿ ಸೌಹಾರ್ದತೆಯ ಬಗ್ಗೆ ಮಾತನಾಡುವ ಮುಸ್ಲಿಂ ಸಮುದಾಯದ ಕೆಲ ಜನರು ಮುರಿನಕಟ್ಟೆ ವಿಚಾರದಲ್ಲಿ ಕೋಮುಗಲಭೆ ಎಬ್ಬಿಸುತ್ತಿರುವುದು ಸರಿಯಲ್ಲ ಎಂಬ ಅಭಿಪ್ರಾಯ ಜನರಿಂದ ಕೇಳಿಬಂದಿದೆ.

ಇಂದು ನಡೆದ ಘಟನೆಯ ಹಿನ್ನೆಲೆ ನಾಳೆ ಬಿಜೆಪಿ ಹಾಗೂ ಹಿಂದೂ ಸಂಘಟನೆ ಭಾರೀ ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸಿದೆ.