ಭಟ್ಕಳ: ಬಕ್ರೀದ್ ಹಬ್ಬದ ಹಿನ್ನೆಲೆ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಪತ್ತೆಹಚ್ಚಿದ ಪೊಲೀಸರು, 11 ಜಾನುವಾರು ರಕ್ಷಿಸಿದ ಘಟನೆ ತಾಲೂಕಿನ ಜಾಲಿ ಕ್ರಾಸ್ ಸಮೀಪದ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಗುರುವಾರ ಬೆಳಗಿನ ಜಾವ ನಡೆದಿದೆ.
ಸುಮಾರು 1.40 ಲಕ್ಷ ರೂ. ಮೌಲ್ಯದ 14 ಜಾನುವಾರನ್ನು ಈಚರ್ ಕಂಪನಿಯ ಇನ್ಸುಲೇಟರ್ ವಾಹನದಲ್ಲಿ ಹಿಂಸಾತ್ಮಕವಾಗಿ ಹಗ್ಗಗಳಿಂದ ಕಟ್ಟಿ, ನೀರು-ಮೇವು ನೀಡದೆ ಒಂದರ ಮೇಲೊಂದು ತುಂಬಿಕೊಂಡು ಯಾವುದೇ ದಾಖಲೆಗಳಿಲ್ಲದೇ ಸಾಗಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ.
ಗುರುವಾರ ಬೆಳಗಿನ ಜಾವ 4.50ರ ಸುಮಾರಿಗೆ ಜಾಲಿ ಕ್ರಾಸ್ ಬಳಿ ಪೊಲೀಸರು ವಾಹನ ತಡೆದು ನಿಲ್ಲಿಸಲು ಸೂಚಿಸಿದರೂ ಚಾಲಕ ವಾಹನ ನಿಲ್ಲಿಸದೇ ಪರಾರಿಯಾಗಲು ಯತ್ನಿಸಿದ್ದಾನೆ. ಬಳಿಕ ಡೊಂಗರಪಳ್ಳಿ ಸಮೀಪದ ಖುಲ್ಲಾ ಜಾಗದಲ್ಲಿ ವಾಹನ ಬಿಟ್ಟು ಆರೋಪಿತರು ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ವಾಹನದಲ್ಲಿದ್ದ ಜಾನುವಾರುಗಳಲ್ಲಿ ಒಂದು ಕೋಣ, ಒಂದು ಎಮ್ಮೆ ಹಾಗೂ ಒಂದು ಎತ್ತು ಉಸಿರುಗಟ್ಟಿ ಮೃತಪಟ್ಟಿದ್ದು, ಉಳಿದ 11 ಜಾನುವಾರನ್ನು ಪೊಲೀಸರು ರಕ್ಷಿಸಿದ್ದಾರೆ.
ನಗರ ಠಾಣೆ ಪಿಎಸೈ ತಿಮ್ಮಪ್ಪ ಎಸ್. ದೂರು ನೀಡಿದ್ದು, ಪಿಎಸೈ ನವೀನ್ ನಾಯ್ಕ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
