ಅಂಕೋಲಾ/ಹೊನ್ನಾವರ: ಜಿಲ್ಲೆಯ ಅಂಕೋಲಾ ಹಾಗೂ ಮಂಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ನಡೆಸಿದ ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಮಟ್ಕಾ ಜೂಜಾಟ ನಡೆಸುತ್ತಿದ್ದ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಅಂಕೋಲಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ, ಕನಸಿಗದ್ದೆ ನಿವಾಸಿ ಸುರೇಶ ದೇವು ಭೋವಿ (58) ಎಂಬಾತನು ಅಂಕೋಲಾ ತಾಲೂಕಿನ ಶಾಂತಾದುರ್ಗಾ ದೇವಸ್ಥಾನದ ಹಿಂಭಾಗದ ಕಂತ್ರಿ ಹೋಗುವ ಸಾರ್ವಜನಿಕ ರಸ್ತೆಯ ಬದಿಯಲ್ಲಿ ಸಾರ್ವಜನಿಕರನ್ನು ಕರೆಯಿಸಿ, ಅದೃಷ್ಟದ ಅಂಕೆಗಳ ಮೇಲೆ ಹಣ ಪಂಥ ಕಟ್ಟಿಸಿ ಮಟ್ಕಾ ಜೂಜಾಟ ನಡೆಸುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಆರೋಪಿತನಿಂದ ₹630 ನಗದು ಹಣ ಹಾಗೂ ಮಟ್ಕಾ ಜೂಜಾಟಕ್ಕೆ ಬಳಸುತ್ತಿದ್ದ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಪೊಲೀಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಮಂಕಿ ಪೊಲೀಸ್ ಠಾಣೆ ವ್ಯಾಪ್ತಿಯ ಇಡಗುಂಜಿ ಕ್ರಾಸ್ ಬಳಿಯ ವಿನಾಯಕ ವನ ಪಾರ್ಕ್ ಪಕ್ಕದ ಕಚ್ಚಾ ರಸ್ತೆ ಬಳಿ ಮಟ್ಕಾ ಜೂಜಾಟ ನಡೆಸುತ್ತಿದ್ದ ಹೊನ್ನಾವರದ ಜಗದೀಶ ಧರ್ಮಾ ನಾಯ್ಕ (38) ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿಯು ಸಾರ್ವಜನಿಕರಿಂದ ಹಣ ಪಡೆದು 1 ರೂಪಾಯಿಗೆ 80 ರೂಪಾಯಿ ನೀಡುವುದಾಗಿ ಹೇಳಿ ಓ.ಸಿ. ಮಟ್ಕಾ ಅಂಕೆ ಸಂಖ್ಯೆಗಳ ಮೇಲೆ ಹಣ ಪಂಥ ಕಟ್ಟಿಸುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿದ್ದು, ₹560 ನಗದು, ಮಟ್ಕಾ ಸಂಖ್ಯೆ ಬರೆದ ಚೀಟಿ ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಮಂಕಿ ಪೊಲೀಸ್ ಠಾಣೆಯಲ್ಲಿ ಕೆ.ಪಿ. ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
