ಉಡುಪಿ: ಸರಣಿ ಮನೆಗಳ್ಳತನ ನಡೆಸುತ್ತಿದ್ದ ಅಂತಾರಾಜ್ಯ ಮುಸುಕುಧಾರಿ ಖತರ್ನಾಕ್ ಕಳ್ಳರ ಟ್ಯಾಟೂ-313 ಗ್ಯಾಂಗ್ ಅನ್ನು ಮಣಿಪಾಲ ಪೊಲೀಸರು ಬೇಧಿಸಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿ, ಬರೋಬ್ಬರಿ ₹7,90 ಲಕ್ಷ  ಮೌಲ್ಯದ ಚಿನ್ನಾಭರಣಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಬೆಂಗಳೂರು ಸಿಂಗಸಂದ್ರ ವಾರ್ಡ್‌ ರಾಘವೇಂದ್ರ ಲೇಔಟ್‌ 7 ಕ್ರಾಸ್ ನಿವಾಸಿ ದರ್ಶನ್‌ ಆರ್‌. (21) ಹಾಗೂ ದಾವಣಗೆರೆ ಜಿಲ್ಲೆಯ ಬಸವನಹಾಳ ಗೊಲ್ಲರಹಟ್ಟಿ ನಿವಾಸಿ ಚಂದ್ರು (26) ಬಂಧಿತ ಆರೋಪಿಗಳು. ಇವರ ವಿರುದ್ಧ ಕರ್ನಾಟಕ, ತಮಿಳುನಾಡು ಹಾಗೂ ಆಂಧ್ರಪ್ರದೇಶಗಳಲ್ಲೂ ಕಳ್ಳತನದ ಪ್ರಕರಣ ದಾಖಲಾಗಿದೆ.

ಉಡುಪಿ ಮಣಿಪಾಲದ ಶಿವಳ್ಳಿ ಗ್ರಾಮದ ಕುಂಜಿಬೆಟ್ಟು ಮಂಚಿಕೋಡಿ ನಿವಾಸಿ ಅಮಿತಾ ಡ್ಯಾನಿಯಲ್ ಅವರು ಮಕ್ಕಳೊಂದಿಗೆ 2026ರ ಫೆ.3ರಂದು ಮಧ್ಯಾಹ್ನ 1.45ಕ್ಕೆ ಮನೆಯ ಬಾಗಿಲು ಮತ್ತು ಹೊರಗಿನ ಗೇಟಿಗೆ ಬೀಗ ಹಾಕಿ ತಾಯಿ ಮನೆಗೆ ತೆರಳಿದ್ದವರು ಫೆ.4ರಂದು ಮಧ್ಯಾಹ್ನ 1.30ಕ್ಕೆ ಹಿಂತಿರುಗಿದ್ದರು. ಈ ವೇಳೆ ಪಕ್ಕದ ಮನೆಯವರು ಮನೆಯ ಬಾಗಿಲು ತೆರೆದಿರುವುದಾಗಿ ತಿಳಿಸಿದ ಹಿನ್ನೆಲೆ ಮನೆ ಪರಿಶೀಲಿಸಿದಾಗ ಕಳ್ಳರು 75 ಗ್ರಾಂ ತೂಕದ ಸುಮಾರು 7 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿಕೊಂಡು ಪರಾರಿಯಾಗಿರುವುದು ಬೆಳಕಿಗೆ ಬಂದಿತ್ತು.

ಘಟನೆ ಸಂಬಂಧಿಸಿ ಪ್ರಕರಣ ದಾಖಲಿಸಿಕೊಂಡ ಮಣಿಪಾಲ ಠಾಣಾ ಪೊಲೀಸರು ತನಿಖೆ ನಡೆಸಿ ಆರೋಪಿಗಳ ಹುಡುಕಾಟ ಮುಂದುವರಿಸಿದ್ದರು. ಈ ಕೃತ್ಯವನ್ನು ಆರೋಪಿಗಳಾದ ದರ್ಶನ್ ಹಾಗೂ ಚಂದ್ರ ಜತೆ ಇನ್ನಿಬ್ಬರು ನಡೆಸಿದ್ದು, ಬಳಿಕ ಆರೋಪಿಗಳು ಶಿವಮೊಗ್ಗ ಮಾರ್ಗವಾಗಿ ಬೆಂಗಳೂರಿಗೆ ಪರಾರಿಯಾಗಿದ್ದರು. ಆದರೆ, ಎರಡನೇ ಬಾರಿ ಜಿಲ್ಲೆಗೆ ಕಳ್ಳತನಕ್ಕೆಂದು ಬಂದಾಗ ಪೊಲೀಸರಿಗೆ ಸಿಕ್ಕಿಬಿದ್ದು ತಮ್ಮ ಕೃತ್ಯದ ಬಗ್ಗೆ ಬಾಯಿಬಿಟ್ಟಿದ್ದಾರೆ.

ಆರೋಪಿಗಳ ಬಂಧನ ಹೇಗಾಯ್ತು ..? ಜೂ.6ರಂದು ಮಣಿಪಾಲ ತನಿಖಾ ವಿಭಾಗದ ಪಿಎಎಸ್‌ಐ ಶಂಭುಲಿಂಗಯ್ಯ, ಠಾಣಾ ಅಪರಾಧ ವಿಭಾಗದ ಸಿಬಂದಿ ರವಿರಾಜ್‌ ಮತ್ತು ಮಂಜುನಾಥ ಜತೆ ರಾತ್ರಿ ಗಸ್ತು ತಿರುಗುತ್ತಿದ್ದಾಗ ಇಂದ್ರಾಳಿ ರೈಲ್ವೇ ಗೋಡೌನ್ ರಸ್ತೆ ಬಳಿ ಇಬ್ಬರು ಅನುಮಾನಾಸ್ಪದವಾಗಿ ತಿರುಗುತ್ತಿದ್ದ ಬಗ್ಗೆ ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿದ್ದರು. ಈ ವೇಳೆ ಆರೋಪಿಗಳ ಕೈಯಲ್ಲಿ ಅನುಮಾನಸ್ಪದ ವಸ್ತುಗಳು ಕಂಡು ಬಂದಿದ್ದು, ಕೂಡಲೇ ವಶಕ್ಕೆ ಪಡೆದುಕೊಂಡು ಕೂಲಂಕುಷವಾಗಿ ವಿಚಾರಣೆ ನಡೆಸಿದ್ದರು. ಪೊಲೀಸರ ಕೈಗೆ ಸಿಕ್ಕಿ ಬೀಳುವ ಮುನ್ನ ಸುಮಾರು 3-4 ಮನೆಗಳ ಬಳಿ ಸುತ್ತಾಕಿ ಬಂದಾಗ ಯಾವುದೋ ಕಾರು ಬಂದದ್ದನ್ನು ನೋಡಿ ವಾಪಾಸ್ ತೆರಳಿದ್ದರು. ಪೊಲೀಸರ ವಿಚಾರಣೆ ವೇಳೆ ರೈಲ್ವೇ ಹಳಿ ಹತ್ತಿರದ ಬೀಗ ಹಾಕಿದ ಮನೆಗಳ ಬಾಗಿಲು ಮುರಿದು ಒಳ ಪ್ರವೇಶಿಸಿ ಕಳ್ಳತನ ಮಾಡಿದ್ದಾಗಿ ತಿಳಿಸಿದ್ದಲ್ಲದೇ, ಅದೇ ಪರಿಸರದಲ್ಲಿ ಮತ್ತೆ ಕಳ್ಳತನ ಮಾಡಲು ಯೋಜನೆ ರೂಪಿಸಿ ಹೊರಟಿದ್ದೆವು ಎಂದು ಬಾಯ್ಬಿಟ್ಟಿದ್ದರು.

ಬಳಿಕ ಆರೋಪಿಗಳ ಕೈಯಿಂದ ಮನೆಗಳ ಬಾಗಿಲು ಮುರಿಯಲು ತಂದಿದ್ದ ಕಬ್ಬಿಣದ ಸಾಮಗ್ರಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಬಳಿಕ ಮಣಿಪಾಲ ಪೊಲೀಸ್‌ ಠಾಣೆಗೆ ಕರೆತಂದ ಬಳಿಕ ಆರೋಪಿಗಳನ್ನು ಪೊಲೀಸ್‌ ನಿರೀಕ್ಷಕ ಮಹೇಶ ಪ್ರಸಾದ್‌ ವಿಚಾರಣೆ ನಡೆಸಿದ್ದು, ಈ ವೇಳೆ 2026ರ ಫೆ.3ರಂದು ಅಮಿತಾ ಡ್ಯಾನಿಯಲ್ ಅವರ ಮನೆ ಕಳ್ಳತನ ಮಾಡಿದ್ದು ಕೂಡಾ ಇವರೇ ಎಂದು ಒಪ್ಪಿಕೊಂಡಿದ್ದರು. ಅಲ್ಲದೇ, ತಮ್ಮೊಂದಿಗೆ ಇನ್ನಿಬ್ಬರು ಆರೋಪಿಗಳಿದ್ದರು ಎಂಬ ಮಾಹಿತಿ ಕೂಡಾ ನೀಡಿದ್ದು, ಈ ಇಬ್ಬರು ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಚಿನ್ನಾಭರಣ ವಶಕ್ಕೆ: ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು ಆರೋಪಿಗಳಿಂದ ಕಳ್ಳತನ ಮಾಡಿದ ಚಿನ್ನಾಭರಣವನ್ನು ವಶಪಡಿಸಿಕೊಳ್ಳುವ ಸಲುವಾಗಿ ಪುನಃ ಪೊಲೀಸ್‌ ಕಸ್ಟಡಿಗೆ ಪಡೆದುಕೊಂಡಿದ್ದರು. ಪೊಲೀಸರ ವಿಚಾರಣೆ ವೇಳೆ ಆರೋಪಿತರು ಶಿವಮೊಗ್ಗದ ಲಾಡ್ಜ್‌ವೊಂದರ ರೂಮ್‌ನಲ್ಲಿ ಚಿನ್ನಾಭರಣವನ್ನು ಇಟ್ಟಿರುವ ಬಗ್ಗೆ ತಿಳಿಸಿದ ಹಿನ್ನೆಲೆ ಮಣಿಪಾಲ ಪೊಲೀಸರು ಶಿವಮೊಗ್ಗಕ್ಕೆ ತೆರಳಿ ರೂಮ್‌ನಲ್ಲಿಟ್ಟಿದ್ದ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ. ಆರೋಪಿಗಳಿಂದ 5,06,000 ರೂ. ಮೌಲ್ಯದ 39.70ಗ್ರಾಂ ತೂಕದ 1 ಚಿನ್ನದ ಕರಿಮಣಿ ಸರ, 1,86,000ರೂ. ಮೌಲ್ಯದ 13.30ಗ್ರಾಂ ತೂಕದ 1 ಚಿನ್ನದ ನೆಕ್ಲೇಸ್, 44,000ರೂ. ಮೌಲ್ಯದ 3.15ಗ್ರಾಂ ತೂಕದ 1 ಚಿನ್ನದ ಕಿವಿಯೋಲೆ, 54,000ರೂ. ಮೌಲ್ಯದ 3.87ಗ್ರಾಂ ತೂಕದ 1 ಚಿನ್ನದ ಚೈನ್‌ ಸೇರಿದಂತೆ ಒಟ್ಟು 60 ಗ್ರಾಂ ತೂಕದ 7,90,000ರೂ. ಮೌಲ್ಯದ ಚಿನ್ನಾಭರಣಗಳು ಹಾಗೂ ಆರೋಪಿಗಳಿಂದ 2 ಮೊಬೈಲ್‌ ಪೋನ್‌ ಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಗ್ಯಾಂಗ್‌ನಲ್ಲಿಧಾರೆ 12 ಸದಸ್ಯರು: ಪೊಲೀಸ್ ಮೂಲದ ಮಾಹಿತಿಯಂತೆ ಈ ಗ್ಯಾಂಗ್‌ನಲ್ಲಿ 12 ಮಂದಿ ಸದಸ್ಯರಿದ್ದರು, ಕೆಲವರು ಬೆಂಗಳೂರಿನಲ್ಲಿದ್ದರೆ, ಉಳಿದವರು ವಿವಿಧ ಪ್ರಕರಣಗಳಿಗೆ ಸಂಬಂಧಿಸಿ ಜೈಲಿನಲ್ಲಿದ್ದಾರೆ. ಈ ಆರೋಪಿಗಳು ಕೈಗಳಿಗೆ ಟ್ಯಾಟೂ-313 ಎಂಬ ಹಚ್ಚೆ ಹಾಕಿಕೊಂಡು ಇದೇ ಹೆಸರಿನಲ್ಲಿ ಗುರುತಿಸಿಕೊಂಡಿದ್ದಾರೆ. ಕರ್ನಾಟಕ ತಮಿಳುನಾಡು ಹಾಗೂ ಆಂಧ್ರಪ್ರದೇಶ ರಾಜ್ಯಗಳ ರೈಲ್ವೇ ನಿಲ್ದಾಣದ ಹತ್ತಿರವಿರುವ ಮನೆಗಳನ್ನು ಗುರಿಯಾಗಿಸುತ್ತಿದ್ದರು. ರಾತ್ರಿ ವೇಳೆ ಮುಖಕ್ಕೆ ಮಾಸ್ಕ್‌ ಹಾಕಿಕೊಂಡು ಕೈಗಳಿಗೆ ಗ್ಲೌಸ್‌ ಹಾಗೂ ಕಾಲಿಗೆ ಸಾಕ್ಸ್‌ ಧರಿಸಿಕೊಂಡು ಕೈಯಲ್ಲಿ ಮನೆಯ ಬಾಗಿಲು ಒಡೆಯಲು ಕಬ್ಬಿಣದ ಆಯುಧಗಳನ್ನು ಹಿಡಿದುಕೊಂಡು ಬೀಗ ಹಾಕಿದ ಮನೆಗಳನ್ನು ಕಳ್ಳತನ ಮಾಡಲು ಕಾರ್ಯಾಚರಣೆಗೆ ಇಳಿಯುತ್ತಿದ್ದರು. ಈ ಆರೋಪಿಗಳು ಸುರತ್ಕಲ್‌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲೂ 2025 ರ ಸೆಪ್ಟೆಂಬರ್‌ ತಿಂಗಳಲ್ಲಿ ಕಳ್ಳತನ ಮಾಡಿರುವ ಬಗ್ಗೆ ಮಾಹಿತಿ ದೊರಕಿದೆ.