Bhatkal| ನೂತನವಾಗಿ ನಿರ್ಮಿಸಿದ್ದ ಅಮ್ಮನವರ ಹೊರೆ ಇಡುವ ಮುರಿನಕಟ್ಟೆಯನ್ನು ಧ್ವಂಸವನ್ನು ಖಂಡಿಸಿ ಹಾಗೂ ಕೂಡಲೇ ಕಟ್ಟೆಯನ್ನು ನಿರ್ಮಿಸುವಂತೆ ಆಗ್ರಹಿಸಿ ವಿಶ್ವ ಹಿಂದೂ ಪರಿಷತ್, ಹಿಂದೂ ಜಾಗರಣ ವೇದಿಕೆ, ಬಜರಂಗದಳ, ಆರ್‌ಎಸ್‌ಎಸ್‌ ಸೇರಿದಂತೆ ವಿವಿಧ ಹಿಂದೂ ಪರ ಸಂಘಟನೆಗಳು ಇಂದು ಶುಕ್ರವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ‌ ಮೆರವಣಿಗೆ ನಡೆಸಿತು.

ಮಧ್ಯಾಹ್ನ ಚನ್ನಪಟ್ಟಣದ ಹನುಮಂತ ದೇವಸ್ಥಾನದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿ ನಂತರ ತಾಲ್ಲೂಕು ಆಡಳಿತ ಸೌಧಕ್ಕೆ ತೆರಳಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿತು.

ತಾಲ್ಲೂಕು ಆಡಳಿತ ಸೌಧದ ಆವರಣದಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಹಿಂದೂ ಜಾಗರಣ ವೇದಿಕೆಯ ಪ್ರಮುಖ ಶ್ರೀಕಾಂತ ಶೆಟ್ಟಿ ಕಾರ್ಕಳ ಮಾತನಾಡಿ, ಭಟ್ಕಳ ಪಟ್ಟಣದಲ್ಲಿ ನೂತನವಾಗಿ ಮರುನಿರ್ಮಿಸಿದ್ದ ಮುರಿನಕಟ್ಟೆಗೆ ಹಾನಿ ಮಾಡಿದ್ದ ಘಟನೆಯಲ್ಲಿ ಭಾಗಿಯಾಗಿರುವ ಮುಸ್ಲಿಂ ಸಮುದಾಯದವರ ಮೇಲೆ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲು ಹಾಗೂ ಕೂಡಲೇ ಮುರಿನಕಟ್ಟೆಯನ್ನು ನಿರ್ಮಿಸಿ ಕೊಡುವಂತೆ ಒತ್ತಾಯಿಸಿದರು.

ಪ್ರತಿಭಟನೆಗೆ ಬೆಂಬಲ: ವಿವಿಧ ಹಿಂದು ಪರ ಸಂಘಟನೆಗಳು ಕರೆ ಕೊಟ್ಟ ಭಟ್ಕಳ ಬಂದ್ ಪ್ರತಿಭಟನೆಗೆ ಭಟ್ಕಳ ರಿಕ್ಷಾ ಚಾಲಕರ ಸಂಘ, ಹಿಂದೂ ಅಂಗಡಿಕಾರರು ಬೆಂಬಲ ಘೋಷಿಸಿದ್ದು, ಭಟ್ಕಳ ನಾಮಧಾರಿ ಸಮಾಜ ಸೇರಿದಂತೆ ತಾಲ್ಲೂಕಿನ ವಿವಿಧ ಹಿಂದೂ ಸಮಾಜ ಪ್ರತಿಭಟನೆಗೆ ಬೆಂಬಲ ಘೋಷಿಸಿತ್ತು.

ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಭಟ್ಕಳದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಪ್ರತಿಭಟನೆಯಲ್ಲಿ ಮಾಜಿ ಸಚಿವ ಶಿವಾನಂದ ನಾಯ್ಕ, ಮಾಜಿ ಶಾಸಕ ಸುನೀಲ್ ನಾಯ್ಕ, ಪ್ರಮುಖರಾದ ಗೋವಿಂದ ನಾಯ್ಕ ಸೇರಿದಂತೆ ಸಹಸ್ರಾರು ಸಂಖ್ಯೆಯಲ್ಲಿ ಹಿಂದುಗಳು ಭಾಗವಹಿಸಿದ್ದರು.