ಪುತ್ತೂರು: ಇಲ್ಲಿನ ಕಠಾರದಲ್ಲಿರುವ ಕುಮಾರಧಾರ ನದಿಗೆ ಗೆಳೆಯರ ಜತೆ ಈಜಲು ತೆರಳಿದ್ದ ವಿದ್ಯಾರ್ಥಿಯೋರ್ವ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಗುರುವಾರ ನಡೆದಿದೆ. 

ಪುತ್ತೂರಿನಲ್ಲಿ ಫಾರ್ಮಸಿ ವ್ಯಾಸಂಗ ಮಾಡುತ್ತಿದ್ದ ಗದಗ ಮೂಲದ ವಿದ್ಯಾರ್ಥಿ ಕಿರಣ್ ಸಾವಿಗೀಡಾದ ಯುವಕ. ನಾಲ್ವರು ಗೆಳೆಯರ ಜತೆ ನದಿಯಲ್ಲಿ ಸ್ನಾನ ಮಾಡಲು ಕಿರಣ್ ತೆರಳಿದ್ದ. ಆದರೆ, ಈ ವೇಳೆ ನೀರಿನ ಸೆಳೆತಕ್ಕೆ ಒಳಗಾಗಿ ನೀರಿನಲ್ಲಿ ಮುಳುಗಿ ಯುವಕ ಸಾವನ್ನಪ್ಪಿದ್ದಾನೆ.  ಪುತ್ತೂರು ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಸ್ಥಳದಲ್ಲಿ ನೀರಿಗಿಳಿಯದಂತೆ ಫಲಕವಿದ್ದರೂ ಯುವಜನರು, ವಿದ್ಯಾರ್ಥಿಗಳು ಇಲ್ಲಿ ನೀರಿಗಿಳಿದು ಪ್ರಾಣ ಕಳೆದುಕೊಳ್ಳುತ್ತಿರುವುದನ್ನು ತಡೆಯಬೇಕು ಎಂದು ಜನರು ಒತ್ತಾಯಿಸಿದ್ದಾರೆ.