Joida| ಗಣೇಶಗುಡಿಯಲ್ಲಿ ರಾಫ್ಟಿಂಗ್‌ಗೆ ಬಂದಿದ್ದ ಆಂಧ್ರಪ್ರದೇಶ ಮೂಲದ ಪ್ರವಾಸಿಗನೊಬ್ಬ ಕರೆಂಟ್ ಶಾಕ್‌ಗೆ ಬಲಿಯಾದ ಪ್ರಕರಣಕ್ಕೆ ಸಂಬಂಧಿಸಿ ಸಿಲ್ವರ್ ಬಿಲ್ ರೆಸಾರ್ಟ್ ಮಾಲಕರು ಹಾಗೂ ಸಂಬಂಧಪಟ್ಟವರ ವಿರುದ್ಧ ಜೋಯಿಡಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಂಧ್ರಪ್ರದೇಶದ ವಿಜಯವಾಡದ ಪೋಸ್ಟಲ್ ಕಾಲೋನಿಯ ನಿವಾಸಿ ಮಹೇಶ್ ಮೋರ್ಲಾ ಮೃತ ಪ್ರವಾಸಿಗನಾಗಿದ್ದಾನೆ. ಈ ಕುರಿತು ಮೃತನ ತಂದೆ ರಾಮು ಮೋರ್ಲಾ ನೀಡಿದ ದೂರಿನ ಮೇರೆಗೆ ಬಿಎನ್‌ಎಸ್-2023ರ ಕಲಂ 106(1) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ದೂರಿನ ಪ್ರಕಾರ, ಮೇ 22ರಂದು ಮಹೇಶ್ ಮೋರ್ಲಾ ತನ್ನ ಸ್ನೇಹಿತರಾದ ಕುಶಾಲ್ ಮಂಜುನಾಥ, ಹರಿ ರಾಧಾಕೃಷ್ಣ ಹಾಗೂ ನವೀನ್‌ಕುಮಾರ್ ಜೊತೆ ಕರ್ನಾಟಕ ಪ್ರವಾಸಕ್ಕೆ ಬಂದಿದ್ದರು. ಮೇ 23ರಂದು ರಾಮನಗರದ ಗಾರ್ಡನ್ ವಿಲ್ಲಾ ಹೋಂಸ್ಟೇನಲ್ಲಿ ವಾಸ್ತವ್ಯ ಹೂಡಿ ಬಳಿಕ ಗಣೇಶಗುಡಿಗೆ ತೆರಳಿ ಅಕ್ವಾವುಡ್‌ನಲ್ಲಿ ರಾಫ್ಟಿಂಗ್ ನಡೆಸಿದ್ದರು. ಸಂಜೆ ಸುಮಾರು 4.30ರ ವೇಳೆಗೆ ರಾಫ್ಟಿಂಗ್ ಮುಗಿದ ಬಳಿಕ ಸಿಲ್ವರ್ ಬಿಲ್ ರೆಸಾರ್ಟ್ ಸಮೀಪದ ಜಟ್ಟಿಯ ಬಳಿ ಬೋಟ್‌ನಿಂದ ಇಳಿಯುವಂತೆ ಗೈಡ್ ಸೂಚಿಸಿದ್ದಾನೆ. ಈ ವೇಳೆ ಮಹೇಶ್ ದಡದತ್ತ ತೆರಳುತ್ತಿದ್ದಾಗ ಏಕಾಏಕಿ ಕಿರುಚಿಕೊಂಡಿದ್ದಾನೆ. ಸಹಾಯಕ್ಕೆ ಧಾವಿಸಿದ ಸ್ನೇಹಿತರಿಗೆ ಸಹ ಕರೆಂಟ್ ಶಾಕ್ ಅನುಭವವಾಗಿದ್ದು, ತಕ್ಷಣ ರಾಫ್ಟಿಂಗ್ ಗೈಡ್ ಮಹೇಶ್ ಹಾಗೂ ಮತ್ತೊಬ್ಬರನ್ನು ದಡಕ್ಕೆ ಕರೆತಂದಿದ್ದಾನೆ. ಅಸ್ವಸ್ಥಗೊಂಡಿದ್ದ ಮಹೇಶ್‌ನನ್ನು ದಾಂಡೇಲಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.

ಸಿಲ್ವರ್ ಬಿಲ್ ರೆಸಾರ್ಟ್ ನವರು ತಮ್ಮ ರೆಸಾರ್ಟಗೆ ನೀರಿಗಾಗಿ ಕಾಳಿನದಿಯ ದಡದಲ್ಲಿ ಸಬ್ ಮರ್ಶಿಬಲ್ ವಾಟರ್ ಪಂಪ್ ಅಳವಡಿಸಿದ್ದು, ಅದರ ವೈಯರ್‌ದಿಂದ ವಿದ್ಯುತ್ ನೀರಿಗೆ ಹರಿದಿದ್ದರಿಂದ ಈ ದುರ್ಘಟನೆ ಸಂಭವಿಸಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಅಲ್ಲದೆ, ಅಪಾಯಕಾರಿ ಪ್ರದೇಶದಲ್ಲಿ ಯಾವುದೇ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.