Dandeli | ‘ನಿಮ್ಮ ಕ್ರೆಡಿಟ್‌ ಕಾರ್ಡ್‌ ಅವಧಿ ಮುಗಿಯಲಿದೆ… ತಕ್ಷಣ ಕೆವೈಸಿ ಅಪ್ಡೇಟ್‌ ಮಾಡಿ’ ಈ ಒಂದೇ ಮಾತಿಗೆ ನಂಬಿಕೆ ಇಟ್ಟ ವ್ಯಕ್ತಿಯೊಬ್ಬರು ಸೈಬರ್‌ ವಂಚಕರ ಬಲೆಗೆ ಬಿದ್ದು ಲಕ್ಷಕ್ಕೂ ಅಧಿಕ ಹಣ ಕಳೆದುಕೊಂಡ ಘಟನೆ ಜೊಯಿಡಾ ತಾಲೂಕಿನ ಪಣಸೋಲಿಯಲ್ಲಿ ನಡೆದಿದೆ.

ಪಣಸೋಲಿಯ ಮುನಿರಾಜ ಗೋವಿಂದಸ್ವಾಮಿ ನಾಯ್ಡು (51) ಎಂಬುವವರೇ ವಂಚನೆಗೊಳಗಾದವರು. ಮುನಿರಾಜ ಅವರ ಮೊಬೈಲ್‌ಗೆ 8131876348 ಸಂಖ್ಯೆಯಿಂದ ಕರೆ ಬಂದಿದ್ದು, ಕರೆ ಮಾಡಿದ ವ್ಯಕ್ತಿ ತಾನು ಎಸ್‌ಬಿಐ ಬ್ಯಾಂಕಿನ ಮೇನ್ ಬ್ರಾಂಚ್‌ನ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದಾನೆ. ‘ನಿಮ್ಮ ಕ್ರೆಡಿಟ್‌ ಕಾರ್ಡ್‌ ಶೀಘ್ರದಲ್ಲೇ Expire ಆಗಲಿದೆ. ತಕ್ಷಣ KYC Update ಮಾಡದಿದ್ದರೆ ಕಾರ್ಡ್‌ ಬಂದ್‌ ಆಗುತ್ತದೆ’ ಎಂದು ಹೇಳಿ ಆತಂಕ ಹುಟ್ಟಿಸಿದ್ದಾನೆ.

ವಂಚಕರ ಮಾತಿಗೆ ನಂಬಿದ ಮುನಿರಾಜ ಅವರು ತಮ್ಮ ಕ್ರೆಡಿಟ್‌ ಕಾರ್ಡ್‌ನ ಮಾಹಿತಿಯನ್ನು ನೀಡಿದ್ದಾರೆ. ಬಳಿಕ ಮೊಬೈಲ್‌ಗೆ ಬಂದ OTP ಸಂಖ್ಯೆಗಳನ್ನೂ ಐದು ಬಾರಿ ಹಂಚಿಕೊಂಡಿದ್ದಾರೆ. ಕೆಲವೇ ನಿಮಿಷಗಳಲ್ಲಿ ಅವರ ಖಾತೆಯಿಂದ ಒಟ್ಟು ₹1,23,786 ಹಣವನ್ನು ಹಂತ ಹಂತವಾಗಿ ವಂಚಕರು ವರ್ಗಾವಣೆ ಮಾಡಿಕೊಂಡಿದ್ದಾರೆ. ಹಣ ಕಡಿತವಾದ ಮೆಸೇಜ್‌ಗಳು ಬಂದ ನಂತರ ತಾನು ಮೋಸ ಹೋಗಿರುವುದು ಅರಿತ ಮುನಿರಾಜ ನಾಯ್ಡು, ಹಣ ಹಿಂತಿರುಗಿಸಿಕೊಡುವಂತೆ ದೂರು ನೀಡಿದ್ದಾರೆ. ಈ ಕುರಿತು ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸೈಬರ್‌ ವಂಚಕರ ಪತ್ತೆಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.