Sirsi| ಮದುವೆಗೆ ಸಿದ್ದನಾಗಿದ್ಧ ವೈದ್ಯನ ಕೊಲೆ ಪ್ರಕರಣವನ್ನು ಕೇವಲ 24 ಗಂಟೆಯೊಳಗೆ ಪೋಲಿಸರು ಭೇದಿಸಿದ್ದು, ಓರ್ವ ಆರೋಪಿಯನ್ನು ಬಂಧಿಸಿ ಆತನಿಂದ 15 ಲಕ್ಷ ಮೌಲ್ಯದ ಚಿನ್ನಾಭರಣ‌ ಹಾಗೂ ₹50 ಸಾವಿರ‌ ಹಣವನ್ನು ವಶಪಡಿಸಿಕೊಂಡಿದ್ದಾರೆ.

ಶಿವಮೊಗ್ಗದ ಪಡುಬೈಲ್, ಮಳಲೂರು ತೀರ್ಥಹಳ್ಳಿಯ ಹೊಟೆಲ್ ವ್ಯಾಪಾರಿ ಮಂಜುನಾಥ ಪಿಎಲ್ ಲಿಂಗಯ್ಯ ನಾಯ್ಕ (70) ಎಂಬುವವನೇ ಬಂಧಿತ ಆರೋಪಿ.ಈತ ಶಿರಸಿಯ ಕೆ.ಹೆಚ್.ಬಿ ಕಾಲೋನಿಯಲ್ಲಿ‌ ಎರಡನೇಯ ಮದುವೆಗೆ ತಯಾರಾಗಿದ್ದ ವೈದ್ಯ ಡಾ.ರಮೇಶ್ ಕಲಗುಟಕರ (51) ಅವರನ್ನು ಹತ್ಯೆ ಮಾಡಿ ಚಿನ್ನ ಕದ್ದು ಪರಾರಿಯಾಗಿದ್ದ. ಆರೋಪಿ ಹತ್ಯೆಯಾದ ವೈದ್ಯರ ಸ್ನೇಹಿತನೇ ಆಗಿದ್ದು, ಚಿನ್ನದ ಆಸೆಗೆ ಕೊಲೆ ಮಾಡಿದ್ದಾನೆ.

ಆರೋಪಿ ಮಂಜುನಾಥ್ ಡಾ.ರಮೇಶ್ ಅವರ ಬಳಿ ಹಲವು ಬಾರಿ ಚಿಕಿತ್ಸೆಗಾಗಿ ಬಂದಿದ್ದ. ಇದರಿಂದ ಇಬ್ಬರ ನಡುವೆ ಸ್ನೇಹ ಬೆಳೆದಿತ್ತು. ವೈದ್ಯ ರಮೇಶ್ ಹಲವು ಬಾರಿ ಅವನನ್ನು ಮನೆಗೆ ಕರೆದುಕೊಂಡು ಹೋಗಿದ್ದರು. ಏ.20 ವೈದ್ಯರ ವಿವಾಹ ಆಗಿದ್ದರಿಂದ ಶನಿವಾರ ಬ್ಯಾಂಕ್‌ಗೆ ತೆರಳಿ ಬಂಗಾರ ಬಿಡಿಸಿಕೊಂಡು ಬಂದಿದ್ದರು. ಆರೋಪಿಯನ್ನು ವಿಶ್ವಾಸದಲ್ಲಿ ಮನೆಯಲ್ಲಿ ಇರಿಸಿಕೊಂಡು ಬಂಗಾರದ ಒಡವೆಗಳನ್ನು ತೋರಿಸಿದ್ದರು. ರಾತ್ರಿ ವೇಳೆ ವೈದ್ಯರು ಮಲಗಿದ್ದಾಗ ಆರೋಪಿಯು ಆಯುಧದಿಂದ ಬಲವಾಗಿ ಹೊಡೆದು ಹತ್ಯೆ ಮಾಡಿ, ಮನೆಗೆ ಬೀಗ ಹಾಕಿ ಪರಾರಿಯಾಗಿದ್ದ. ಹತ್ಯೆ ನಡೆದು 24 ಗಂಟೆಯೊಳಗೆ ಪೊಲೀಸರು ಆರೋಪಿಯನ್ನು ಚಿನ್ನದ ಸಮೇತ ಬಂಧಿಸಿದ್ದಾರೆ.

ಕೊಲೆ ಪ್ರಕರಣದ ಆರೋಪಿ ಪತ್ತೆಗಾಗಿ ಡಿವೈಎಸ್ಪಿ ಗೀತಾ ಪಾಟೀಲ್ ನೇತೃತ್ವದಲ್ಲಿ ಎರಡು ವಿಶೇಷ ತಂಡಗಳನ್ನು ರಚಿಸಲಾಗಿತ್ತು. ಈ ವಿಶೇಷ ತಂಡವು ಸ್ಥಳೀಯ ಮಾಹಿತಿ, ತಾಂತ್ರಿಕ ಹಾಗೂ ಇನ್ನಿತರ ತನಿಖಾ ಆಯಾಮಗಳಿಂದ ತನಿಖೆ ಕೈಗೊಂಡು ಪ್ರಕರಣ ಜರುಗಿ 24 ಗಂಟೆಯೊಳಗಾಗಿ ಪತ್ತೆ ಹಚ್ಚಿದೆ.