ಮಧ್ಯಪ್ರಾಚ್ಯದಲ್ಲಿ ಯುದ್ಧದ ಇಫೆಕ್ಟ್‌ನಿಂದ ಕಚ್ಚಾತೈಲ ಪೂರೈಕೆಗೆ ಸಮಸ್ಯೆಯಾಗಿದ್ದು, ದೇಶದ ಆರ್ಥಿಕತೆಗೆ ಬೃಹತ್ ಕೊಡುಗೆ ನೀಡುತ್ತಿರುವ ಮೀನುಗಾರಿಕೆ ಕ್ಷೇತ್ರಕ್ಕೂ ಭಾರೀ ಪೆಟ್ಟು ಬಿದ್ದಿದೆ.

ಮೀನುಗಾರಿಕೆ ನಡೆಸುವ ಬೋಟ್‌ಗಳಿಗೆ ಡೀಸೆಲ್ ಪೂರೈಕೆಯಲ್ಲಿ ವ್ಯತ್ಯಯವಾದ ಕಾರಣ ದ. ಕ., ಉಡುಪಿ ಹಾಗೂ ಉ.ಕ. ಜಿಲ್ಲೆಯಲ್ಲಿ ನೂರಾರು ಬೋಟ್ (ಯಾಂತ್ರೀಕೃತ) ಗಳು ಬಂದರಿನಲ್ಲಿ ಲಂಗರು ಹಾಕಿವೆ. ಪರಿಣಾಮ ಬೋಟ್ ಮಾಲಕರು ಭಾರೀ ನಷ್ಟ ಅನುಭವಿಸುತ್ತಿದ್ದಾರೆ.

ಆಳ ಸಮುದ್ರ ಮೀನುಗಾರಿಕೆ ನಡೆಸುವವರಿಗೆ 10 ಅಥವಾ 11 ದಿನಗಳ ಒಂದು ಟ್ರಿಪ್‌ ಗೆ 5,500ರೂ.ನಿಂದ 6 ಸಾವಿರ ರೂ.ನಂತೆ ತಿಂಗಳಿಗೆ ಸರಾಸರಿ 18 ಸಾವಿರ ಲೀ. ಡೀಸೆಲ್ ಅಗತ್ಯ. ಮೀನುಗಾರರಿಗೆ ಸಬ್ಸಿಡಿ ದರದಲ್ಲಿ 10 ತಿಂಗಳಿಗೆ 90
ಸಾವಿರ ಲೀ. ದೊರಕಿದರೆ, ಹೆಚ್ಚುವರಿ 9 ಸಾವಿರ ಲೀ. ಡೀಸೆಲ್ ಪ್ರತೀ ತಿಂಗಳು ಬೇಕು. ಪ್ರಸ್ತುತ ಇಂಧನ ಕೊರತೆ ಪರಿಣಾಮ 15 ದಿನಗಳಿಂದ ಮೀನುಗಾರರನ್ನು ಬಾಧಿಸಲಾರಂಭಿಸಿದೆ.

ಇಂಧನ ಕೊರತೆ ನಿಭಾಯಿಸಲು ಸದ್ಯ ಮೀನುಗಾರಿಕೆ ಇಲಾಖೆಯಿಂದ ಕ್ಯೂ ಮಾದರಿಯಲ್ಲಿ ಲಭ್ಯವಿರುವ ಡೀಸೆಲ್ ಹಂಚಿಕೆ ಮಾಡಲಾಗುತ್ತಿದೆ. ಬಂದರು ಆವರಣದಲ್ಲಿರುವ ಡೀಸೆಲ್ ಬಂಕ್‌ಗಳಿಂದ ಡೀಸೆಲ್ ವಿತರಣೆ ಮಾಡಲಾಗುತ್ತಿದೆ. ಉಡುಪಿಯಲ್ಲಿ 6 ಕನ್ಸೂಮರ್ ಹಾಗೂ 4 ರಿಟೈಲರ್ ಬಂಕ್, ಮಂಗಳೂರು ವ್ಯಾಪ್ತಿಯಲ್ಲಿ 3 ರಿಟೈಲ್ ಬಂಕ್ ಹಾಗೂ 2 ಕನ್ಸೂಮರ್ ಬಂಕ್ ಹಾಗೂ ಉ.ಕ. ಜಿಲ್ಲೆಯಲ್ಲಿ ಕನ್ಸೂಮರ್ ಮತ್ತು ರಿಟೈಲರ್ ಸೇರಿ 18 ಬಂಕ್‌ಗಳಿವೆ.

ಪ್ರಸ್ತುತ, ನಷ್ಟದ ಹಿನ್ನೆಲೆ ಕೆಲವು ಕನ್ಸೂಮ‌ರ್ ಬಂಕ್‌ಗಳು ಸ್ಥಗಿತಗೊಂಡಿವೆ. ಹೀಗಾಗಿ, ರಿಟೈಲರ್ ಡೀಸೆಲ್ ಬಂಕ್‌ ಗಳಲ್ಲಿ ಡೀಸೆಲ್ ವಿತರಿಸಲಾಗುತ್ತಿದ್ದರೂ, ಮೀನುಗಾರರಿಗೆ ಅಗತ್ಯವಿರುವಷ್ಟು ಪ್ರಮಾಣದಲ್ಲಿ ದೊರಕುತ್ತಿಲ್ಲ.
ಹೊರಗಿನ ಖಾಸಗಿ ಪೆಟ್ರೋಲ್ ಬಂಕ್‌ ಗಳಲ್ಲೂ 500 ಲೀ.ಗಿಂತ ಹೆಚ್ಚಿನ ಡೀಸೆಲ್ ನೀಡುತ್ತಿಲ್ಲ. ಹೀಗಾಗಿ ಉಡುಪಿ ವ್ಯಾಪ್ತಿಯಲ್ಲಿ 150ಕ್ಕೂ ಹೆಚ್ಚು ಬೋಟ್ ಗಳು, ಮಂಗಳೂರು ವ್ಯಾಪ್ತಿಯಲ್ಲಿ 200ಕ್ಕೂ ಹೆಚ್ಚು ಉ.ಕ. ದಲ್ಲಿ 150ಕ್ಕೂ ಹೆಚ್ಚು ಬೋಟ್‌ ಗಳು ಸಮುದ್ರಕ್ಕೆ ತೆರಳದೆ ನಿಂತಿವೆ. ಉಳಿದ ಬೋಟ್‌ ಗಳು ಇತರರಿಂದ ಡೀಸೆಲ್ ಪಡೆದು ಬದುಕುತ್ತಿವೆ.

ಪ್ರಸ್ತುತ ನಿಗದಿತ ದರದಲ್ಲಿ ರಿಟೇಲರ್ ಬಂಕ್ ಗಳಿಗೆ ಬರುವ ಡೀಸೆಲ್‌ ನ್ನು ಆ ಬಂಕ್‌ನ ಗ್ರಾಹಕ ಬೋಟುಗಳಿಗೆ ನೀಡಲು ಮಾತ್ರ ಸಾಧ್ಯವಾಗುತ್ತದೆ. ಹಾಗಾಗಿ ಶೇ.60ರಷ್ಟು ಬೋಟುಗಳಿಗೆ ಡೀಸೆಲ್ ಸಿಗುತ್ತಿಲ್ಲ. ಕೇಂದ್ರ ಸರಕಾರ ಆತೀ ಶೀಘ್ರದಲ್ಲಿ ರಿಟೇಲರ್ ಬಂಕ್‌ಗೆ ನೀಡುವ ಡೀಸೆಲ್ ಪ್ರಮಾಣವನ್ನು ಜಾಸ್ತಿ ಮಾಡಬೇಕು ಎಂದು ಮಲ್ಪೆ ಯಾಂತ್ರಿಕ ಮತ್ತು ನಾಡದೋಣಿ ಮೀನುಗಾರರ ಸಹಕಾರ ಸಂಘ ಒತ್ತಾಯಿಸಿದೆ.