Bhatkal| ಸ್ನೇಹಿತನಿಗೆ ನೀಡಿದ ಐಫೋನ್ ಮೊಬೈಲ್ ಹಣ ನೀಡದೇ ವಂಚನೆ ನಡೆಸಿರುವುದಲ್ಲದೆ, ಹಣ ಕೇಳಿದಾಗ ಜೀವ ಬೆದರಿಕೆ ಹಾಕಿ, ಹೆಂಡತಿ ಜೊತೆಗಿನ ಖಾಸಗಿ ಫೋಟೊ, ವಿಡಿಯೋ ಬಹಿರಂಗಗೊಳಿಸುವ ಬೆದರಿಕೆ ಹಾಕಿದ ಘಟನೆ ಭಟ್ಕಳದಲ್ಲಿ ನಡೆದಿದೆ.
ಭಟ್ಕಳದ ಬಂದರ ರೋಡಿನ ಗತಫಾನ್ ಅಹ್ಮದ್ (23) ಎಂಬುವವರೇ ಐಫೋನ್ ಕಳೆದುಕೊಂಡವರು. ಈ ಬಗ್ಗೆ ಪೋಲಿಸ್ ದೂರು ನೀಡಿದ್ದು, 2025 ನವೆಂಬರ್ ತಿಂಗಳಲ್ಲಿ ಭಟ್ಕಳದ ಸಂಗೀತಾ ಮೊಬೈಲ್ ಅಂಗಡಿಯಲ್ಲಿ ಸುಮಾರು ₹75,000 ಮೌಲ್ಯದ iPhone 16 (128GB) ಮೊಬೈಲ್ ಖರೀದಿಸಿದ್ದರು. ಇದರಲ್ಲಿ ₹59,237 ಸಾಲದ ರೂಪದಲ್ಲಿ ಪಡೆದು ಕಂತುಗಳಲ್ಲಿ ಹಣ ಪಾವತಿಸುತ್ತಿದ್ದರು.
ಸುಮಾರು ನಾಲ್ಕು ತಿಂಗಳ ಹಿಂದೆ ಭಟ್ಕಳದ ಆಜಾದ್ ನಗರ ನಿವಾಸಿ ಮಹಮದ್ ಅಶೀಲ (22), ತನ್ನ ಮನೆಗೆ ಬಂದು ಮೊಬೈಲ್ ನೀಡುವಂತೆ, ಬಳಿಕ ಹಣ ನೀಡುವುದಾಗಿ ಭರವಸೆ ನೀಡಿದ್ದರಿಂದ ಗತಫಾನ್ ಅಹ್ಮದ್ ಮೊಬೈಲ್ ನೀಡಿದ್ದಾಗಿ ದೂರಿನಲ್ಲಿ ತಿಳಿಸಿದ್ದಾನೆ.
ಆದರೆ ನಂತರ ಹಣ ಕೇಳಿದಾಗ ತಪ್ಪಿಸಿಕೊಳ್ಳುತ್ತಿದ್ದ ಮಹಮದ್ ಅಶೀಲ, ಫೆಬ್ರವರಿ 2026ರಂದು ದುಬೈಗೆ ತೆರಳಿದ್ದಾನೆ. ಕರೆ ಮಾಡಿದಾಗ, ‘ಹಣ ಕೊಡುವುದಿಲ್ಲ, ಏನು ಬೇಕಾದರೂ ಮಾಡು’ ‘ದೇಕ್ ಚಿನಾಲಿಕೆ, ರಾಂಡಕೆ ಅಂತಾ ಕೆಟ್ಟ ಕೆಟ್ಟ ಶಬ್ದಗಳಿಂದ ಬೈದು ‘ಮೇರೆ ಪಾಸ್ ಪೈಸೆ ಮಾಂಗಾತೋ ಮೈ ಐಸಾ ಕರೂಂಗಾ’ ಅಂತಾ ನಿನ್ನ ಹಾಗೂ ನಿನ್ನ ಹೆಂಡತಿಯ ಖಾಸಗಿ ಫೋಟೋ ಹಾಗೂ ವಿಡಿಯೋಗಳನ್ನು ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಜೊತೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವುದಾಗಿ ಆರೋಪಿಸಲಾಗಿದೆ.
ಭಟ್ಕಳ ಪೋಲಿಸರು ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
