Banavasi| ಬನವಾಸಿಯ ಚತುರ್ಯುಗ ಪ್ರತಿಷ್ಠಿತ ಉಮಾ ಮಧುಕೇಶ್ವರ ದೇವರ ವಾರ್ಷಿಕ ರಥೋತ್ಸವದ ವಿಧಿ ವಿಧಾನಗಳು ಮಾರ್ಚ್ 23ರಿಂದ ಆರಂಭವಾಗಿದ್ದು, ಪ್ರಮುಖ ಆಕರ್ಷಣೆಯಾದ ದಕ್ಷಿಣ ಭಾರತದ ಬೃಹತ್ ರಥಗಳಲ್ಲಿ ಒಂದಾದ ‘ಮನ್ಮಹಾಸ್ಯಂದನ’ ಮಹಾರಥೋತ್ಸವ (ದೊಡ್ಡ ತೇರು) ಮಾರ್ಚ್ 30ರ ಸೋಮವಾರ ಅತ್ಯಂತ ವಿಜೃಂಭಣೆಯಿಂದ ಜರುಗಲಿದೆ.

ರಾಜ್ಯದ ಅತಿ ದೊಡ್ಡ ಹಾಗೂ ಅತಿ ಭಾರದ ಬನವಾಸಿಯ ಮಹಾರಥವನ್ನು ನೋಡಲು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸೇರಿ ದೇವರ ದರ್ಶನಕ್ಕೆ ಆಗಮಿಸುತ್ತಾರೆ.

ಈ ಬಾರಿಯ ರಥೋತ್ಸವದ ತಾಂತ್ರಿಕತೆಯನ್ನು ವೇ.ಮೂ. ಶ್ರೀನಿಧಿ ಮಂಗಳೂರು ಅವರು ನಿರ್ವಹಿಸಲಿದ್ದಾರೆ. ಮಾರ್ಚ್ 23ರಂದು ಶ್ರೀ ಮಹಾಗಣಪತಿ ಪೂಜೆ, ಮೃತ್ತಿಕಾಹರಣ ಹಾಗೂ ಅಂಕುರಾರೋಪಣದೊಂದಿಗೆ ಉತ್ಸವಕ್ಕೆ ಚಾಲನೆ ದೊರಕಿದೆ.

ಬುಧವಾರ 25 ರಿಂದ ಪ್ರತಿನಿತ್ಯ ಹಗಲೋತ್ಸವದ ತೇರು ಮತ್ತು ತಿರುಗುಣಿ ತೇರುಗಳನ್ನು ಎಳೆಯಲಾಗುತ್ತದೆ ಹಾಗೂ ಜಪ, ಹೋಮ-ಹವನಗಳು ನಿತ್ಯ ನಡೆಯುತ್ತವೆ. ಮಾರ್ಚ್ 26ರಂದು ವೃಷಭ ಯಂತ್ರೋತ್ಸವ, 27ರಂದು ಪುಷ್ಪಮಂಜರಿ ಯಂತ್ರೋತ್ಸವ, 28ರಂದು ಸಿಂಹ ಯಂತ್ರೋತ್ಸವ ನಡೆಯಲಿವೆ.

ರವಿವಾರ 29ರಂದು ಹೂವಿನ ತೇರು (ಗಜ ಯಂತ್ರೋತ್ಸವ) ನಡೆಯಲಿದ್ದು, ನಿತ್ಯದಂತೆ ಬಲಿ ಹಾಗೂ ಹವನ, ಚಿಕ್ಕ ತೇರುಗಳ ನಂತರ ರಾತ್ರಿ 10.30ರ ಬಳಿಕ ಹೂವಿನ ತೇರಿನ ರಥೋತ್ಸವ ನಡೆಯಲಿದೆ.

ಸೋಮವಾರ 30ರಂದು ಉಮಾ ಮಧುಕೇಶ್ವರ ದೇವರ ಮನ್ಮಹಾಸ್ಯಂದನ ಮಹಾರಥೋತ್ಸವ (ದೊಡ್ಡ ತೇರು) ರಾತ್ರಿ ನಡೆಯಲಿದೆ. ಅಂದು ಬೆಳಿಗ್ಗೆ ವಿಜೃಂಭಣೆಯ ಪಲ್ಲಕ್ಕಿ ಉತ್ಸವದಲ್ಲಿ ಬಂದು ರಥಾರೂಢರಾಗುವ ಶ್ರೀ ಉಮಾ ಮಧುಕೇಶ್ವರ ದೇವರ ಜಾತ್ರೆಯ ಸಂಭ್ರಮ ಅಲ್ಲಿ ನಡೆಯುತ್ತದೆ. ಬೆಳಿಗ್ಗೆ 11 ಗಂಟೆ ನಂತರ ರಥವೇರುವ ಶ್ರೀ ದೇವರ ದರ್ಶನಕ್ಕಾಗಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸರತಿ ಸಾಲಿನಲ್ಲಿ ದರ್ಶನ ಪಡೆಯಲು ಪ್ರಾರಂಭಿಸುವರು. ದರ್ಶನ ಮಧ್ಯರಾತ್ರಿ 11 ಗಂಟೆಯವರೆಗೆ ನಡೆಯುತ್ತದೆ. ನಂತರ ರಥೋತ್ಸವ ಆರಂಭಗೊಂಡು ರಥ ನೆಲೆಗೊಳ್ಳಲು ಮರುದಿನ ಬೆಳಗಿನ ಜಾವವಾಗುತ್ತದೆ.
ಮಂಗಳವಾರ 31ರಂದು ಕುಂಕುಮೋತ್ಸವ ನಡೆಯಲಿದ್ದು, ಏಪ್ರಿಲ್ 1ರಂದು ಅವಭೃಥ ತೀರ್ಥಸ್ನಾನದೊಂದಿಗೆ ಜಾತ್ರೆಯ ವಿಧಿವಿಧಾನಗಳು ಸಂಪನ್ನಗೊಳ್ಳಲಿವೆ.

ಮಹಾರಥೋತ್ಸವದ ದಿನ ಅನ್ನಸಂತರ್ಪಣೆ ನಡೆಯಲಿದ್ದು, ವಿವಿಧ ಸ್ವಯಂಸೇವಕರಿಂದ ಲಘುಪಾನೀಯ ಹಾಗೂ ಪ್ರಸಾದ ವ್ಯವಸ್ಥೆ ಇರುತ್ತದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ದರ್ಶನ ಪಡೆಯಲು ವ್ಯವಸ್ಥಾಪನಾ ಸಮಿತಿ ಕೋರಿದೆ.