Karwar| LPG ಸಿಲಿಂಡರ್‌ಗಳ ಅಕ್ರಮ ಸಾಗಾಟ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಾರವಾರದ ಮಾಜಾಳಿ ಬಳಿ ಇರುವ ಗೋವಾ-ಕರ್ನಾಟಕ ಗಡಿಯಲ್ಲಿ ಪೊಲೀಸರು ವಿಶೇಷ ತಪಾಸಣೆ ಕೈಗೊಂಡಿದ್ದಾರೆ.

ಇತ್ತೀಚಿನವರೆಗೂ ಗೋವಾ ಕಡೆಗೆ ನಡೆಯುತ್ತಿದ್ದ ಅಕ್ರಮ ಮದ್ಯ ಸಾಗಾಟದ ಮೇಲೆ ಮಾತ್ರ ಕಣ್ಣಿಟ್ಟಿದ್ದ ಪೊಲೀಸರು, ಇದೀಗ ಸಿಲಿಂಡರ್‌ಗಳ ಅಕ್ರಮ ಸಾಗಾಟದತ್ತ ಗಮನ ಹರಿಸಲು ಆರಂಭಿಸಿರುವುದು ವಿಶೇಷವಾಗಿದೆ.

ಕಾರವಾರ-ಗೋವಾ ಚೆಕ್‌ಪೋಸ್ಟ್‌ನಲ್ಲಿ ದಿನಪೂರ್ತಿ ವಾಹನಗಳ ಪರಿಶೀಲನೆ ತೀವ್ರಗೊಳಿಸಲಾಗಿದೆ. ಕಾರವಾರದಿಂದ ಗೋವಾ ಗಡಿಗೆ ಕೇವಲ ಸುಮಾರು 10 ಕಿಮೀ ದೂರ ಇರುವುದರಿಂದ, ಕೆಲವು ಮಂದಿ ಸಂಬಂಧಿಕರ ನೆಪವೊಡ್ಡಿ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳನ್ನು ಗೋವಾಕ್ಕೆ ಸಾಗಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಪ್ರವಾಸೋದ್ಯಮ ಸೀಸನ್ ನಲ್ಲೇ‌ ಗೋವಾದ ಹೊಟೆಲ್, ರೆಸಾರ್ಟ್‌ಗಳಿಗೆ ಕಮರ್ಷಿಯಲ್ ಸಿಲಿಂಡರ್ ಕೊರತೆ ಇರುವುದೂ ಸಹ ಇದಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

ಈ ಎಲ್ಲಾ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಉತ್ತರಕನ್ನಡ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಅವರು ಪೊಲೀಸರಿಗೆ ವಿಶೇಷ ತಂಡ ರಚಿಸಿ ರಾಜ್ಯದ ಗಡಿಯಲ್ಲಿ ಸಿಲೆಂಡರ್ ಅಕ್ರಮ ಸಾಗಾಟದ ಬಗ್ಗೆ ಕಠಿಣ ತಪಾಸಣೆ ನಡೆಸುವಂತೆ ಸೂಚನೆ ನೀಡಿದ್ದಾರೆ.

ಅದರಂತೆ ಮಾಜಾಳಿ ಚೆಕ್‌ಪೋಸ್ಟ್‌ನಲ್ಲಿ ವಾಹನಗಳನ್ನು ನಿಲ್ಲಿಸಿ ಪರಿಶೀಲನೆ ನಡೆಸಲಾಗುತ್ತಿದ್ದು, ಅನುಮಾನಾಸ್ಪದ ವಾಹನಗಳ ಮೇಲೆ ಹೆಚ್ಚು ಗಮನ ಹರಿಸಲಾಗಿದೆ. ಪೊಲೀಸರ ಈ ಕ್ರಮದಿಂದ ಅಕ್ರಮ ಸಿಲೆಂಡರ್ ಸಾಗಾಟಕ್ಕೆ ಬ್ರೇಕ್ ಆಗಬಹುದು ಎಂಬ ನಿರೀಕ್ಷೆ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.