ಉಡುಪಿ‌ : ಜಾನುವಾರುಗಳ ಕಾಲುಬಾಯಿ ರೋಗ (ಎಫ್ಎಂಡಿ)ಕ್ಕೆ ಲಸಿಕೆ ನೀಡಲು ಪಶುಸಂಗೋಪನ ಇಲಾಖೆ ತಂಡ ರಚಿಸಿ ಸನ್ನದ್ಧವಾಗಿದ್ದು, 9ನೇ ಸುತ್ತಿನ ಲಸಿಕೆ ಕಾರ್ಯಕ್ರಮ ಎಪ್ರಿಲ್‌ನಿಂದ ನಡೆಯಲಿದೆ.

ರಾಜ್ಯಾದ್ಯಂತ ಪ್ರತೀ ಜಿಲ್ಲೆಗಳಿಗೆ ಈಗಾಗಲೇ ವಿತರಣೆಯಾಗಿರುವ 2ರಿಂದ 3 ಲಕ್ಷ ಡೋಸ್ ಗಳನ್ನು ಎಪ್ರಿಲ್‌ನಲ್ಲಿ ಅಭಿಯಾನದ ಮೂಲಕ ರಾಜ್ಯದಲ್ಲಿ ಏಕಕಾಲದಲ್ಲಿ ಜಾನುವಾರುಗಳಿಗೆ ನೀಡುವ ಪ್ರಕ್ರಿಯೆ ನಡೆಯಲಿದೆ.

ಪ್ರತೀ ಜಿಲ್ಲೆಯಲ್ಲೂ ಮೈಕ್ರೋ ಪ್ಲ್ಯಾನ್

ಪ್ರತೀ ಜಿಲ್ಲೆಗಳಲ್ಲೂ ಈ ಸಂಬಂಧ ಮೈಕ್ರೋ ಪ್ಲ್ಯಾನ್ ನಡೆಸಿ ಪ್ರತೀ ಹಳ್ಳಿಗಳಲ್ಲೂ ಮನೆ ಮನೆಗೂ ತೆರಳಿ ಜಾನುವಾರುಗಳಿಗೆ ಲಸಿಕೆ ಹಾಕಲಾಗುತ್ತದೆ. ಒಂದು ಪಶು ವೈದ್ಯಕೀಯ ಆಸ್ಪತ್ರೆಯ ಸುತ್ತ ಎಷ್ಟು ಮನೆಗಳು ಮತ್ತು ಎಷ್ಟು ಗ್ರಾಮಗಳು ಬರುತ್ತವೆ ಹಾಗೂ ಗ್ರಾಮದಲ್ಲಿ ಎಲ್ಲೆಲ್ಲಿ ಭೇಟಿ ನೀಡಲಾಗುವುದು ಎಂದು ವೈದ್ಯಾಧಿಕಾರಿಗಳೇ ಪ್ಲಾನ್ ನೀಡುತ್ತಾರೆ. ಈ ಮೈಕ್ರೋ ಪ್ಲಾನಿಂಗ್ ಕೆಲಸ ಮಾರ್ಚ್‌ನಲ್ಲಿ ಈಗಾಗಲೇ ಪ್ರಾರಂಭಗೊಂಡಿದೆ. ಈ ಮೈಕ್ರೋ ಪ್ಲ್ಯಾನ್ ನಡಿ ಒಂದು ತಿಂಗಳಲ್ಲೇ ಎಲ್ಲಾ ಗ್ರಾಮಗಳು ಪೂರ್ಣವಾಗುವ ರೀತಿ ವೈದ್ಯಾಧಿಕಾರಿಗಳ ಸಹಾಯದಿಂದ ಇಲಾಖೆಯ ಅಧಿಕಾರಿಗಳು ಯೋಜನೆ ರೂಪಿಸುತ್ತಿದ್ದಾರೆ. ಬಳಿಕ ಈ ಯೋಜನೆಯನ್ನು ಸರಕಾರಕ್ಕೆ ಸಲ್ಲಿಸಿ ಅದರಂತೆ ಕೆಲಸ ನಡೆಸಿಕೊಂಡು ಹೋಗಲಾಗುತ್ತದೆ.

ಒಂದು ತಿಂಗಳ ಅಭಿಯಾನ

ಗರ್ಭ ಧರಿಸಿರುವ, ಜ್ವರ ಬಂದು ಕಾಯಿಲೆ ಹೊಂದಿರುವ ಹಾಗೂ ಮೂರು ತಿಂಗಳ ಒಳಗಿನ ಕರುವಿಗೆ ಮುಂಜಾಗ್ರತ ಕ್ರಮವಾಗಿ ಈ ಡೋಸ್ ಗಳನ್ನು ನೀಡಲಾಗುತ್ತದೆ. ಇದರ ಜತೆ ಬೀಡಾಡಿ ದನಗಳಿಗೆ ಡೋಸ್ ನೀಡಲು ಗೋಶಾಲೆಗಳು, ಗ್ರಾ.ಪಂ.ಗಳು ಹಾಗೂ ಸ್ವಯಂಸೇವಕರನ್ನು ಸೇರಿಸಿಕೊಳ್ಳಲಾಗುತ್ತದೆ. ಒಂದು ಬಾರಿ ಡೋಸ್ ನೀಡುವ ಪ್ರಕ್ರಿಯೆ ಮುಗಿಸಿದ ಬಳಿಕವೂ ಮತ್ತೆ ಕೂಂಬಿಂಗ್ ರೌಂಡ್ ಇಲಾಖೆ ವತಿಯಿಂದ ಮಾಡಲಾಗುತ್ತಿದೆ. ಯೋಜನೆಯಂತೆ ಒಂದು ತಿಂಗಳ ಅಭಿಯಾನ ಇದಾಗಿದ್ದು, ಕೆಲಸ ಬಾಕಿಯಾದಲ್ಲಿ ಅವುಗಳನ್ನು ಮುಗಿಸಲು ಸುಮಾರು 10-15 ದಿನಗಳ ಹೆಚ್ಚುವರಿ ಸಮಯಗಳು ದೊರಕುತ್ತವೆ ಅಂತಾರೆ ಅಧಿಕಾರಿಗಳು.

ಉಡುಪಿಗೆ 2.3 ಲಕ್ಷ ಡೋಸ್ ಪೂರೈಕೆ

ಉಡುಪಿ ಜಿಲ್ಲೆಯಲ್ಲಿ ಜಾನುವಾರುಗಳಿಗೆ ಕಾಲುಬಾಯಿ ರೋಗ ಬಾರದಂತೆ ಮಾ. 11ರಂದು ಹೆಚ್ಚುವರಿ 2.3 ಲಕ್ಷ ಡೋಸ್ ಗಳು ಇಲಾಖೆಗೆ ಬಂದುಸೇರಿವೆ. ಕಾಲುಬಾಯಿ ರೋಗ ತಡೆಗಟ್ಟುವ ಉದ್ದೇಶದಿಂದ ಕೇವಲ ಲಸಿಕೆ ನೀಡಲು ವಿವಿಧ ಇಲಾಖೆಗಳಲ್ಲಿರುವ ಆರೋಗ್ಯ ಸಿಬಂದಿಗೆ ತರಬೇತಿ ನೀಡಲಾಗಿದೆ. ವಿವಿಧ ವಿಭಾಗಗಳ 340 ಸಿಬಂದಿ ಪಟ್ಟಿಯಿದ್ದು, ಲಸಿಕೆ ನೀಡಲು 210ರಿಂದ 220 ಸಿಬಂದಿ ನಿಯೋಜಿಸಲಾಗುತ್ತದೆ. ಇದಕ್ಕೆ ವೈದ್ಯಾಧಿಕಾರಿಗಳನ್ನು ಸೂಪರ್‌ವೈಸರ್‌ಆಗಿ ನೇಮಿಸಲಾಗುತ್ತದೆ. 22 ಖಾಯಂ ಹಾಗೂ 6 ಮಂದಿ ಗುತ್ತಿಗೆ ಆಧಾರದಲ್ಲಿ ವೈದ್ಯರು ಸೇವೆ ಸಲ್ಲಿಸುತ್ತಿದ್ದಾರೆ. ಸದ್ಯ ಮೈಕ್ರೋ ಪ್ಲಾನ್ ನಡೆಸಲಾಗುತ್ತಿದ್ದು, ರಾಜ್ಯದ ಸೂಚನೆಯಂತೆ ಎಪ್ರಿಲ್‌ನಲ್ಲಿ ಲಸಿಕೆ ನೀಡಲಾಗುತ್ತದೆ ಅಂತಾರೆ ಉಡುಪಿ ಜಿಲ್ಲಾ ಪಶು ಸಂಗೋಪನೆ ಇಲಾಖೆ ಉಪನಿರ್ದೇಶಕ ಡಾ| ಎಂ.ಸಿ. ರೆಡ್ಡಪ್ಪ.