Dharwad| ಧಾರವಾಡದಲ್ಲಿ ಮಂಗಳವಾರ ಸುರಿದ  ಮಳೆಯು ಜನಜೀವನವನ್ನು ಅಸ್ತವ್ಯಸ್ತಗೊಳಿಸಿದ್ದು, ರೈತರಲ್ಲಿ ಆತಂಕ ಮೂಡಿಸಿದೆ.

ಮಧ್ಯಾಹ್ನದ ವೇಳೆ ಏಕಾಏಕಿ ಗುಡುಗು-ಮಿಂಚಿನೊಂದಿಗೆ ಆರಂಭವಾದ ಮಳೆಯು ಕುಂದಗೋಳ, ಕಲಘಟಗಿ ಸೇರಿದಂತೆ ಹಲವೆಡೆ ಆಲಿಕಲ್ಲು ಸುರಿಮಳೆಯಾಗಿ ಪರಿವರ್ತನೆಗೊಂಡಿತು. ಕೆಲವೇ ನಿಮಿಷಗಳಲ್ಲಿ ರಸ್ತೆ, ಮನೆಮೇಲುಗಳು ಹಾಗೂ ಹೊಲಗಳಲ್ಲಿ ಆಲಿಕಲ್ಲುಗಳು ಬಿದ್ದು ಬಿಳಿ ಹಾಸು ಕಾಶ್ಮೀರದಂತೆ ಕಾಣಿಸಿಕೊಂಡವು.

ಈ ಅಕಾಲಿಕ ಮಳೆಯಿಂದಾಗಿ ತೋಟಗಾರಿಕೆ ಬೆಳೆಗಳು, ಹೂ ಬೆಳೆಗಳು ಹಾಗೂ ತರಕಾರಿ ಬೆಳೆಗಳಿಗೆ ಹಾನಿಯಾಗಿರುವ ಸಾಧ್ಯತೆ ಇದೆ. ಈಗಾಗಲೇ ಬೆಳೆ ಕಟಾವು ಹಂತದಲ್ಲಿದ್ದ ರೈತರು ನಷ್ಟದ ಭೀತಿಯಲ್ಲಿ ಇದ್ದಾರೆ.

ಮಳೆಯ ಪರಿಣಾಮವಾಗಿ ಕೆಲ ತಗ್ಗು ಪ್ರದೇಶಗಳಲ್ಲಿ ನೀರು ನಿಂತು ಸಂಚಾರಕ್ಕೂ ಅಡಚಣೆ ಉಂಟಾಯಿತು. ಜನರು ಮಳೆಯಿಂದ ತಪ್ಪಿಸಿಕೊಳ್ಳಲು ಅಂಗಡಿ ಮುಂಗಟ್ಟುಗಳ ಕೆಳಗೆ ಆಶ್ರಯ ಪಡೆಯಬೇಕಾಯಿತು.

ಇನ್ನು ಧಾರವಾಡದಲ್ಲಿ ಸುರಿದ ಸತತ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಯಿತು. ಯುಗಾದಿ ಹಾಗೂ ರಮ್ಜಾನ್ ಹಬ್ಬದ ಪ್ರಯುಕ್ತ ಅಂಗಡಿ ವ್ಯಾಪಾರಸ್ಥರು ಮಳೆಯಿಂದ ತೀವ್ರ ನಷ್ಟ ಅನುಭವಿಸುವಂತಾಯಿತು. 

ಹವಾಮಾನ ಇಲಾಖೆ ಮುಂದಿನ ಕೆಲವು ದಿನಗಳಿಗೂ ಗುಡುಗು-ಮಿಂಚಿನೊಂದಿಗೆ ಮಳೆಯಾಗುವ ಸಾಧ್ಯತೆ ಇರುವುದಾಗಿ ಎಚ್ಚರಿಕೆ ನೀಡಿದ್ದು, ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ.