ಕಾರವಾರ: ಭಾರತೀಯ ನೌಕಾಪಡೆಯಲ್ಲಿ ಯುದ್ಧನೌಕೆಗಳ ಹೆಚ್ಚಳದ ಜತೆ ಭವಿಷ್ಯದ ನಿರ್ವಹಣಾ ತಂತ್ರಗಳನ್ನು ಬಲಪಡಿಸುವ ಅಗತ್ಯತೆ ಹಾಗೂ ಮೂಲ ಪ್ರಮುಖ ಕಾರ್ಯಗಳ ಮೇಲೆ ಹೆಚ್ಚಿನ ಕೇಂದ್ರೀಕರಣ ಅಗತ್ಯವಿದೆ ಎಂದು ಭಾರತೀಯ ನೌಕಾಪಡೆಯ ಚೀಫ್ ಆಫ್ ಮೆಟೀರಿಯಲ್, ವೈಸ್ ಅಡ್ಮಿರಲ್ ಬಿ. ಶಿವಕುಮಾರ್ ಹೇಳಿದರು.

ಭಾರತೀಯ ನೌಕಾಪಡೆಯ ಚೀಫ್ ಆಫ್ ಮೆಟೀರಿಯಲ್ ಎವಿಎಸ್ಎಂ, ವಿಎಸ್ಎಂ ಅವರು ಶನಿವಾರ ಕಾರವಾರದಲ್ಲಿರುವ ನೌಕಾ ಹಡಗು ದುರಸ್ತಿ ಯಾರ್ಡ್ (NSRY) ಗೆ ಭೇಟಿ ನೀಡಿ, ಅಧಿಕಾರಿ ಹಾಗೂ ಸಿಬ್ಬಂದಿ ಜತೆ ಮಾತನಾಡಿ, ನೌಕಾಪಡೆಯ ಕಾರ್ಯಾಚರಣೆಗಳು ಹಾಗೂ ಹೆಚ್ಚಿನ ಪ್ರಮಾಣದ ಹಡಗು ದುರಸ್ತಿ ಕಾರ್ಯಗಳನ್ನು ಸಮರ್ಥವಾಗಿ ನಿರ್ವಹಿಸುವ ಜತೆ ಮುಂದಿನ ಯೋಜನೆಗಳಿಗೆ ಪೂರಕ ಸಾಮರ್ಥ್ಯ ವೃದ್ಧಿಗೆ ಕೈಗೊಂಡಿರುವ ಸಿದ್ಧತೆಗಳ ಬಗ್ಗೆ ಮಾಹಿತಿ ನೀಡಿದರು.

ಯಾರ್ಡ್ನ ವಿವಿಧ ಕಾರ್ಯಾಗಾರಗಳಿಗೆ (ಶಾಪ್ ಫ್ಲೋರ್) ಭೇಟಿ ನೀಡಿ ಪರಿಶೀಲನೆ ನಡೆಸಿದ ವೈಸ್ ಅಡ್ಮಿರಲ್ ಬಿ. ಶಿವಕುಮಾರ್ ಅವರು, ಸಿಬ್ಬಂದಿ ಜತೆ ಸಂವಾದ ನಡೆಸಿ ಅವರ ಕೆಲಸದ ಪ್ರಗತಿ ಬಗ್ಗೆ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ಅತ್ಯಾಧುನಿಕ ಸಂವಹನ ಪ್ರಯೋಗಾಲಯವನ್ನು (Advanced Communications Lab) ಅವರು ಉದ್ಘಾಟಿಸಿದರು.
