Karwar| ಅಬಕಾರಿ ದಾಳಿಗೆ ಹೆದರಿ ಗೋವಾ ಮದ್ಯ ಹಾಗೂ ದ್ವಿಚಕ್ರ ವಾಹನವನ್ನೂ‌ ಬಿಟ್ಟು ವ್ಯಕ್ತಿ ಪರಾರಿಯಾದ ಘಟನೆ ಮುಡಗೇರಿ ಅರಣ್ಯ ಪ್ರದೇಶದಲ್ಲಿ ನಡೆದಿದೆ.

ಮಂಗಳವಾರ ಮಧ್ಯಾಹ್ನ ಸುಮಾರು 12.30ರ ವೇಳೆಗೆ ಖಚಿತ ಮಾಹಿತಿಯ ಮೇರೆಗೆ ಮುಡಗೇರಿ ಅರಣ್ಯ ಪ್ರದೇಶದಲ್ಲಿ ಪರಿಶೀಲನೆ ನಡೆಸುವಾಗ, ಅರಣ್ಯ ಪ್ರದೇಶದಿಂದ ಗ್ರಾಮದ ಕಡೆಗೆ ಬರುತ್ತಿದ್ದ ಬಿಳಿ ಬಣ್ಣದ ದ್ವಿಚಕ್ರ ವಾಹನ ವನ್ನು ಅಧಿಕಾರಿಗಳು ಗಮನಿಸಿ, ಸಂಶಯಗೊಂಡು ವಾಹನ ನಿಲ್ಲಿಸಲು ಹಲವು ಬಾರಿ ಸೂಚಿಸಿದರೂ ಸವಾರನು ನಿಲ್ಲಿಸದೆ ಅತಿ ವೇಗದಲ್ಲಿ ಮುಂದಕ್ಕೆ ದ್ವಿಚಕ್ರ ವಾಹನದಲ್ಲಿ ಸಾಗಿದ್ದಾನೆ.

ಅಧಿಕಾರಿಗಳು ಬೆನ್ನಟ್ಟಿದಾಗ, ರಸ್ತೆಯಲ್ಲಿ ನಿಯಂತ್ರಣ ತಪ್ಪಿದ ಸವಾರನು ದ್ವಿಚಕ್ರ ವಾಹನದೊಂದಿಗೆ ರಸ್ತೆಯ ಬದಿಗೆ ಬಿದ್ದು, ವಾಹನವನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ.

ಅಬಕಾರಿ ಸಿಬ್ಬಂದಿಗಳು ಪರಿಶೀಲಿಸಿದಾಗ ಒಂದು ಚೀಲದಲ್ಲಿ 750 ಮಿಲಿಯ 36 ಗೋವಾ ಸ್ಪೆಷಲ್ ಫಾಮ್ ಫೆನ್ನಿ ಬಾಟಲ್‌ಗಳು ಹಾಗೂ 500 ಮಿಲಿಯ 12 ಕಿಂಗ್‌ಫಿಷರ್ ಸ್ಟ್ರಾಂಗ್ ಬಿಯರ್ ಟಿನ್‌ಗಳು ಪತ್ತೆಯಾಗಿವೆ.

ಅಬಕಾರಿ ಇಲಾಖೆ ಅಧಿಕಾರಿಗಳು KA-30 R-7906 ಸಂಖ್ಯೆಯ ದ್ವಿಚಕ್ರ ವಾಹನ ಹಾಗೂ ಮದ್ಯವನ್ನು ಜಪ್ತುಗೊಳಿಸಿದ್ದು, ಜಪ್ತುಪಡಿಸಿದ ವಸ್ತುಗಳ ಒಟ್ಟು ಅಂದಾಜು ಮೌಲ್ಯ ಸುಮಾರು 79,800 ರೂ. ಎಂದು ತಿಳಿದುಬಂದಿದೆ.

ಈ ಸಂಬಂಧ ಅಬಕಾರಿ ನಿರೀಕ್ಷಕರು ಪ್ರಕರಣ ದಾಖಲಿಸಿದ್ದು, ಪರಾರಿಯಾದ ಆರೋಪಿಯನ್ನು ಪತ್ತೆಹಚ್ಚಲು ತನಿಖೆ ಮುಂದುವರೆದಿದೆ.