ಶಿರಸಿ: ತಾಲೂಕಿನ ಉಂಚಳ್ಳಿಯ ಮಾಸ್ತಿಜಡ್ಡಿ ಹೊಳೆಯಲ್ಲಿ ಭಾನುವಾರ ಮಧ್ಯಾಹ್ನ ನಡೆದ ದುರಂತದಲ್ಲಿ ನೀರಿನಲ್ಲಿ ಮುಳುಗಿ ಇಬ್ಬರು ಬಾಲಕರು ಮೃತಪಟ್ಟಿದ್ದಾರೆ.
ಹರ್ಷಾ ಮಂಜುನಾಥ ನಾಯ್ಕ (19) ಹಾಗೂ ಆತನ ಸಹೋದರ ಮದನ ಗಜಾನನ ನಾಯ್ಕ (16) ಮೃತಪಟ್ಟ ಬಾಲಕರು ಎಂದು ಗುರುತಿಸಲಾಗಿದೆ. ಇಬ್ಬರೂ ಮಧ್ಯಾಹ್ನ ಹೊಳೆಯಲ್ಲಿ ಈಜಲು ತೆರಳಿದ್ದ ವೇಳೆ ಆಳವಾದ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಶ್ರೀ ಮಾರಿಕಾಂಬಾ ಲೈಫ್ ಗಾರ್ಡ್ ತಂಡ ಸ್ಥಳಕ್ಕೆ ಧಾವಿಸಿ ಶೋಧ ಕಾರ್ಯಾಚರಣೆ ನಡೆಸಿತು. ಲೈಫ್ ಗಾರ್ಡ್ ಸಿಬ್ಬಂದಿಯ ಸಾಹಸಮಯ ಕಾರ್ಯಾಚರಣೆಯಿಂದ ಇಬ್ಬರ ಶವಗಳನ್ನು ಮೇಲಕ್ಕೆತ್ತಲಾಯಿತು.
ಕಾರ್ಯಾಚರಣೆಯಲ್ಲಿ ಮಾರಿಕಾಂಬಾ ಲೈಫ್ ಗಾರ್ಡ್ ತಂಡದ ಗೋಪಾಲ ಗೌಡ, ರಾಜು ಮಡಿವಾಳ, ಪ್ರದೀಪ ಎಸಳೆ, ದೀಪಕ್ ಕಾನಡೆ ಹಾಗೂ ದರ್ಶನ ಕಬ್ಬೆ ಸೇರಿದಂತೆ ಹಲವರು ಭಾಗವಹಿಸಿದ್ದರು.ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
