ಕಾರವಾರ: ಲೋಕ ಕಲ್ಯಾಣಕ್ಕಾಗಿ ಕಾರವಾರ ತಾಲೂಕಿನ ಬಾಡ ಗ್ರಾಮದ ಮಹಾದೇವ ದೇವಸ್ಥಾನದಲ್ಲಿ ಮಾರ್ಚ್ 7 ಮತ್ತು 8ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಬಾಡ ಗ್ರಾಮದ ಅಧಿದೇವರಾದ ಮಹಾದೇವರ ಪುನರ್ ಪ್ರತಿಷ್ಠೆಯ 25ನೇ ವರ್ಷದ ವರ್ಧಾಪನ ಉತ್ಸವವೂ ಇದೇ ಸಂದರ್ಭದಲ್ಲಿ ನಡೆಯಲಿದೆ.
ಈ ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಮಾರ್ಚ್ 7ರಂದು ಬೆಳಗ್ಗೆ ಗಣೇಶ ಪೂಜೆ ಹಾಗೂ ಶ್ರೀಗಂಧದ ಲಿಂಗಾರ್ಚನೆ ಧಾರ್ಮಿಕ ಅನುಷ್ಠಾನದ ವಿಶೇಷ ಸಂಕಲ್ಪ ನಡೆಯಲಿದೆ. ಸಂಕಲ್ಪದಲ್ಲಿ ಭಾಗವಹಿಸಲು ಇಚ್ಛಿಸುವ ಭಕ್ತರಿಗೆ ಬೆಳಗ್ಗೆ 8ರಿಂದ 11ರವರೆಗೆ ಹೆಸರು ನೋಂದಾಯಿಸಲು ಅವಕಾಶ ಕಲ್ಪಿಸಲಾಗಿದೆ.
ಅದೇ ದಿನ ಮಧ್ಯಾಹ್ನ 1 ಗಂಟೆಗೆ ಪೂಜೆ ನಡೆಯಲಿದ್ದು, ಸಂಜೆ 5 ಗಂಟೆಗೆ ಪಾರ್ವತಿ ಮಾತೃಮಂಡಳಿಯ ಸುಮಂಗಲಿಯರೊಂದಿಗೆ ಭಕ್ತರು ಸೇರಿ ‘ಪಾರ್ವತಿಯಲ್ಲಿ ಲಲಿತಾ ಸಹಸ್ರನಾಮ ಪೂರ್ವಕ ಕುಂಕುಮಾರ್ಚನೆ’ ಕಾರ್ಯಕ್ರಮ ನೆರವೇರಿಸಲಿದ್ದಾರೆ. ಸಂಜೆ 7.30ಕ್ಕೆ ಪೂಜಾ ಕಾರ್ಯಗಳು ನಡೆಯಲಿವೆ.
ಮಾರ್ಚ್ 8ರಂದು ಬೆಳಗ್ಗೆ 9 ಗಂಟೆಗೆ ಗೃಹಶಾಂತಿ, ಉಮಾಮಹೇಶ್ವರ ಜಪ, ಅಗ್ನಿಹೋಮ, ರುದ್ರಹೋಮ, ಕಲಾವೃದ್ಧಿ ಹವನ ನಡೆಯಲಿದ್ದು, ಮಧ್ಯಾಹ್ನ 12.30ಕ್ಕೆ ಪೂರ್ಣಾಹುತಿ, ಮಹಾಪೂಜೆ, ಪ್ರಾರ್ಥನೆ ಹಾಗೂ ಪ್ರಸಾದ ವಿತರಣೆ ನಡೆಯಲಿದೆ. ಮಧ್ಯಾಹ್ನ 1ರಿಂದ 3.30ರವರೆಗೆ ಅನ್ನಪ್ರಸಾದ ವಿತರಣೆ ನಡೆಯಲಿದೆ.
ರಾತ್ರಿ 7.30ಕ್ಕೆ ಪೂಜೆ ನಡೆಯಲಿದ್ದು, ರಾತ್ರಿ 9 ಗಂಟೆಗೆ ಮಹಾದೇವ ವಿನಾಯಕ ದೇವಸ್ಥಾನ ಸಮಿತಿ ಹಾಗೂ ಮಾಳ್ಕೋಡಿನ ಯಕ್ಷಪಲ್ಲವಿ ಟ್ರಸ್ಟ್ ಸಹಯೋಗದಲ್ಲಿ ‘ಶ್ರೀ ಕೃಷ್ಣ ಪಾರಿಜಾತ’ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ದೇವತಾ ಕಾರ್ಯದಲ್ಲಿ ಭಾಗವಹಿಸುವವರು ಹಾಗೂ ಸಂಕಲ್ಪಿಸುವವರು ₹555 ಪಾವತಿಸಿ ರಸೀದಿ ಪಡೆಯಬೇಕು. ಅನ್ನ ಸಂತರ್ಪಣೆಗೆ ಧಾನ್ಯ ಅಥವಾ ಹಣ ಸಹಾಯ ಮಾಡುವವರು ಕಚೇರಿಯನ್ನು ಸಂಪರ್ಕಿಸಬಹುದು.
ಪೂರ್ಣಾಹುತಿಗೆ ಬಿಳಿ ವಸ್ತ್ರ, ಎಳ್ಳು, ಪಂಚಧಾನ್ಯ, ತುಪ್ಪ, ತೆಂಗಿನಕಾಯಿ ಮೊದಲಾದ ಮಂಗಳದ್ರವ್ಯಗಳನ್ನು ಸಮರ್ಪಿಸಲು ಅವಕಾಶವಿದೆ. ತರಕಾರಿ, ಧವಸ-ಧಾನ್ಯಗಳನ್ನು ಮಾರ್ಚ್ 7ರವರೆಗೆ ಸ್ವೀಕರಿಸಲಾಗುತ್ತದೆ ಎಂದು ಮಹಾದೇವ ವಿನಾಯಕ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು ಹಾಗೂ ಸರ್ವಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
