Gokarn| ಸೌರಮಂಡಲದಲ್ಲಿ ಭೂಮಿಯ ನೆರಳು ಚಂದ್ರನ ಮೇಲೆ ಬಿದ್ದು ಉಂಟಾಗುವ ಖಗ್ರಾಸ ಚಂದ್ರಗ್ರಹಣ ನಾಳೆ ಮಂಗಳವಾರ ಮಧ್ಯಾಹ್ನ 3:20ಕ್ಕೆ ಆರಂಭವಾಗಿ ಸಂಜೆ 6:47ಕ್ಕೆ ಮುಕ್ತಾಯಗೊಳ್ಳಲಿದೆ. ಖಗೋಳ ವಿದ್ಯಮಾನವಾದ
ಈ ವಿದ್ಯಮಾನವು ಸುಮಾರು 3 ಗಂಟೆ 27 ನಿಮಿಷಗಳ ಕಾಲ ಇರಲಿದೆ. 

ಕರ್ನಾಟಕದಲ್ಲಿ ಇದು ಸಂಜೆ ವೇಳೆ ಚಂದ್ರೋದಯದ ನಂತರ ವಿಶೇಷವಾಗಿ ಮೋಕ್ಷಕಾಲದಲ್ಲಿ ವೀಕ್ಷಣೆಗೆ ಲಭ್ಯವಿದೆ. ಈ ಚಂದ್ರಗ್ರಹಣದ ಹಿನ್ನೆಲೆ ಉತ್ತರಕನ್ನಡ ಜಿಲ್ಲೆಯ ವಿವಿಧ ಪ್ರಮುಖ ಕ್ಷೇತ್ರಗಳಲ್ಲಿ ಪೂಜಾ ಕೈಂಕರ್ಯ ಹಾಗೂ ದೇವರ ದರ್ಶನದಲ್ಲಿ ಬದಲಾವಣೆ ಮಾಡಲಾಗಿದೆ.

ಗೋಕರ್ಣ ಶ್ರೀ ಮಹಾಬಲೇಶ್ವರ ಕ್ಷೇತ್ರ: ಗೋಕರ್ಣ ಮಹಾಬಲೇಶ್ವರ ಕ್ಷೇತ್ರದಲ್ಲಿ ಮುಂಜಾನೆ 6 ಗಂಟೆಯಿಂದ 11.30 ಗಂಟೆಯವರೆಗೆ ಆತ್ಮಲಿಂಗದ ಸ್ಪರ್ಶದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಈ ವೇಳೆ ಸೇವೆಯ ವಿಭಾಗವೂ ತೆರೆದಿರುತ್ತದೆ. ನಂತರ ಮಹಾಪೂಜೆ ನೇರವೇರಿದ ಬಳಿಕ ದೇವಸ್ಥಾನದ ಬಾಗಿಲು ಮುಚ್ಚಲಾಗುತ್ತಿದ್ದು, ಸಂಜೆ 5 ಗಂಟೆಯಿಂದ 7 ಗಂಟೆಯವರೆಗೆ ಮತ್ತೆ ಸ್ಪರ್ಶದರ್ಶನಕ್ಕೆ ಅವಕಾಶ ಒದಗಿಸಲಾಗುತ್ತಿದೆ. ಗ್ರಹಣ ಮೋಕ್ಷಗೊಂಡ ಬಳಿಕ ದೇವಾಲಯ ಶುದ್ಧಿಗೊಳಿಸಿ, ಮಹಾಪೂಜೆ ನಡೆಯಲಿದೆ. ಈ ವೇಳೆ ಅರ್ಚಕರ ಮೂಲಕ ನಡೆಸುವ ಸೇವಾ ವಿಭಾಗ ಇರುವುದಿಲ್ಲ. ಇನ್ನು ಗ್ರಹಣ ಹಿನ್ನೆಲೆ‌ ದೇವಾಲಯದಲ್ಲಿ ಮಧ್ಯಾಹ್ನದ ಪ್ರಸಾದ ಭೋಜನವಿಲ್ಲ. ಆದರೆ, ಸಂಜೆ 7.30ರಿಂದ 8.30ರವರೆಗೆ ಉಪಹಾರ ವ್ಯವಸ್ಥೆಯಿದೆ.

ಮುರುಡೇಶ್ವರ ದೇವಸ್ಥಾನ: ಮುರುಡೇಶ್ವರ ಕ್ಷೇತ್ರದಲ್ಲಿ ಬೆಳಗ್ಗೆ 6.30ರಿಂದ 7ರ ವೇಳೆ ನಡೆಯೋ ಬೆಳಗ್ಗಿನ ಪೂಜೆಯ ಬಳಿಕ ಮಧ್ಯಾಹ್ನ 2 ಗಂಟೆಯ ಪೂಜೆಯನ್ನು ಬೆಳಗ್ಗೆ 8ರಿಂದ 8.30ರ ನಡುವೆ ಮುಗಿಸಲಾಗುತ್ತದೆ. ಬಳಿಕ ಯಾವುದೇ ಪೂಜೆ, ಪುನಸ್ಕಾರಗಳಿಲ್ಲ. ಬೆಳಗ್ಗೆ ಭಕ್ತರಿಗೆ ಉಪಹಾರ ವ್ಯವಸ್ಥೆಯಿದೆಯಾದರೂ ಮಧ್ಯಾಹ್ನದ ಊಟವಿಲ್ಲ.
ಮಧ್ಯಾಹ್ನ 1ರವರೆಗೆ ಭಕ್ತರು ದೇವರ ದರ್ಶನ ಪಡೆಯಬಹುದಾಗಿದ್ದು, ಮಧ್ಯಾಹ್ನ ದೇವಳದ ಬಾಗಿಲು ಎಂದಿನಂತೆ ಮುಚ್ಚುತ್ತದೆ. ಮಧ್ಯಾಹ್ನ 3ಕ್ಕೆ ಮತ್ತೆ ದೇವಸ್ಥಾನದ ಬಾಗಿಲು ತೆರೆಯುತ್ತಿದ್ದು, ಗ್ರಹಣ ಸಮಯ 3.47ಕ್ಕೆ ಆರತಿ ಹಾಗೂ ಗ್ರಹಣ ಮುಕ್ತಾಯದ ಸಮಯದಲ್ಲಿ ಆರತಿ, ಪೂಜೆ ವಿಶೇಷವಾಗಿ ನಡೆಯಲಿದೆ. ರಾತ್ರಿ ಶುದ್ಧೀಕರಣದ ಬಳಿಕ 8ರಿಂದ 8.30ರ ನಡುವೆ ಮಹಾಪೂಜೆ ನಡೆಯಲಿದೆ.

ಇಡಗುಂಜಿ ದೇವಸ್ಥಾನ: ಹೊನ್ನಾವರದ ಇಡಗುಂಜಿಯ ಶ್ರೀ ವಿನಾಯಕ ದೇವಸ್ಥಾನದಲ್ಲಿ ಗ್ರಹಣದ ಹಿನ್ನೆಲೆ ಬೆಳಗ್ಗೆ 9.15ರ ಒಳಗೆ ಬೆಳಗ್ಗೆ ಹಾಗೂ ಮಧ್ಯಾಹ್ನದ ಪೂಜೆ ನಡೆಯಲಿದೆ. ಬಳಿಕ ದೈನಂದಿನಂತೆ ಮಧ್ಯಾಹ್ನ 2 ಗಂಟೆಗೆ ಬಾಗಿಲು ಮುಚ್ಚಿ 4 ಗಂಟೆಗೆ ಮತ್ತೆ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಗ್ರಹಣದ ಹಿನ್ನೆಲೆ ಬೆಳಗ್ಗೆಯಿಂದ ರಾತ್ರಿಯವರೆಗೆ ದೇವಸ್ಥಾನದಲ್ಲಿ ಭಕ್ತರಿಗೆ ಕೇವಲ ದರ್ಶನಕ್ಕೆ ಅವಕಾಶ ನೀಡಲಾಗುತ್ತಿದ್ದು, ಯಾವುದೇ ಸೇವೆಗಳಿಲ್ಲ. ಗ್ರಹಣದ ಸಮಯದಲ್ಲಿ ಅರ್ಚಕರಿಂದ ದೇವರಿಗೆ ಅಭಿಷೇಕ ನಡೆಸಲಾಗುತ್ತಿದ್ದು, 6.47 ಗ್ರಹಣ ಮೋಕ್ಷದ ಬಳಿಕ ಶುದ್ಧೀಕರಣ ಹಾಗೂ ಮಹಾಪೂಜೆ ಜರುಗಲಿದೆ.