Karwar| ತಮ್ಮದು ಮತ್ತು ಶಾಸಕ ಸತೀಶ್‌ ಸೈಲ್‌ ನಡುವಿನ ಸಂಬಂಧ ಒಂದು ರೀತಿ ಗಂಡ ಹೆಂಡ್ತಿ ಸಂಬಂಧ ಎಂದು ಹೇಳಿ ಉಸ್ತುವಾರಿ ಸಚಿವ ಮಂಕಾಳು ವೈದ್ಯ `ಸೈಲ್‌ ವಾಕ್‌ ಔಟ್‌’ಗೆ ತೇಪೆ ಹಚ್ಚುವ ಪ್ರಯತ್ನ ಮಾಡಿದ್ದಾರೆ.

ಸೋಮವಾರ ಬೆಳಗ್ಗೆ ಜಿಲ್ಲಾ ಪಂಚಾಯ್ತಿಯ ಸಭಾ ಭವನದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಸರಕಾರಿ ಆಸ್ಪತ್ರೆಯಲ್ಲಿ ಡಾಕ್ಟರ್‌ಗಳು ಹಾಗೂ ಔಷಧ ಲಭ್ಯತೆಯ ಬಗ್ಗೆ ಇಬ್ಬರ ನಡುವೆ ಸಣ್ಣದಾದ ಮಾತಿನ ಚಕಮಕಿ ನಡೆದಿತ್ತು. ಶಾಸಕ ಸತೀಶ ಸೈಲ್‌ ತಾವೊಬ್ಬ ಆಡಳಿತ ಪಕ್ಷ ಶಾಸಕ ಎಂಬುವುದನ್ನೂ ಮರೆತು ಆಡಳಿತ ವ್ಯವಸ್ಥೆಯ ನ್ಯೂನತೆಗಳ ಬಗ್ಗೆ ಬಹಿರಂಗವಾಗಿ ಅಸಮಾಧಾನ, ಟೀಕೆ ವ್ಯಕ್ತಪಡಿಸುತ್ತಿದ್ದರು. ಅದೊಂದು ರೀತಿಯಲ್ಲಿ `ಸೆಲ್ಫ್‌ ಗೋಲ್‌’ ಹೊಡೆಯುತ್ತಿದ್ದರು.

ಇದರಿಂದ ಕಸಿವಿಸಿಗೊಂಡ ಉಸ್ತುವಾರಿ ಸಚಿವ ಮಂಕಾಳು ವೈದ್ಯ, ನೀವು ಸುಮ್ಮನಿರಿ, ನಾನು ಎಲ್ಲವನ್ನೂ ಸರಿ ಮಾಡುತ್ತೇನೆ ಎಂದು ಬ್ಯಾಲೆನ್ಸ್‌ ಮಾಡುವ ಪ್ರಯತ್ನ ಮಾಡಿದ್ದಾರೆ. ಆದರೆ ಸಚಿವರ ಈ ಮಾತಿಗೆ ಸಿಡಿಮಿಡಿಗೊಂಡ ಶಾಸಕ ಸೈಲ್‌, ಸುಮ್ಮನಿರಲಿಕ್ಕೆ ‘ತಾನೂ ಅಂಗೂಟಾ ಛಾಪ್ ಅಲ್ಲ’ ಎನ್ನುತ್ತಾ ಅಸಮಾಧಾನದಿಂದ ಏಕಾಏಕಿ ವಾಕ್ ಔಟ್ ಮಾಡಿದ್ದ‌ರು.

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ವೈದ್ಯ, ನಮ್ಮ ಮತ್ತು ಶಾಸಕರ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ನಮ್ಮದು ಒಂದು ರೀತಿ ಗಂಡ‌ ಹೆಂಡ್ತಿ ಸಂಬಂಧ. ಶಾಸಕರಿಗೆ ಬೇರೆನೋ ಕೆಲಸ ಇದ್ದಿದ್ದರಿಂದ ಮಧ್ಯದಲ್ಲಿಯೇ ತೆರಳಿದ್ದಾರೆ ಎಂದು ಹೇಳಿ ಡ್ಯಾಮೆಜ್ ಕಂಟ್ರೋಲ್ ಗೆ‌ ಮುಂದಾಗಿದ್ದಾರೆ.

ಒಟ್ಟಾರೆ ಆಡಳಿತ ಪಕ್ಷದ ಶಾಸಕರು ಹಾಗೂ ಉಸ್ತುವಾರಿ ಸಚಿವರ ನಡುವೆ ಎಲ್ಲವೂ ಸರಿ ಇಲ್ಲ. ಇದು ‘ಉಸ್ತುವಾರಿ’ ಪಟ್ಟಕ್ಕಾಗಿ ನಡೆಯುತ್ತಿರುವ ತೆರೆಮರೆಯ ಅಸಮಾಧಾನವೋ ಅಥವಾ ಬೇರೆನೋ ಎಂಬುದು ಮಾತ್ರ ಮುಂದಿನ ದಿನಗಳಲ್ಲಿ ಸ್ಪಷ್ಟವಾಗಲಿದೆ.