ಬಾವಿ ನಿರ್ಮಾಣದ ಕೆಲಸಕ್ಕೆಂದು ಆಗಮಿಸಿದ್ದ ಕೂಲಿ ಕಾರ್ಮಿಕನೋರ್ವನ ಮೇಲೆ ಬಾವಿಯ ದಂಡೆಯ ಮಣ್ಣು ಕುಸಿದು ಬಿದ್ದ ಪರಿಣಾಮ ಮಣ್ಣಲ್ಲಿ ಹೂತು ಹೋಗಿ ಸಾವನ್ನಪ್ಪಿದ ಘಟನೆ ಉಡುಪಿಯಲ್ಲಿ ಮೇ 22ರಂದು ಸಂಜೆ ನಡೆದಿದೆ.
ಕೊಪ್ಪಳ ಮೂಲದ ರಮೇಶ (25) ದಾರುಣವಾಗಿ ಸಾವನ್ನಪ್ಪಿದ ಕೂಲಿ ಕಾರ್ಮಿಕ. ಕಾರ್ಕಳ ಸಾಣೂರು ನಿವಾಸಿ ಪ್ರಭಾತ್ ಶೆಟ್ಟಿ ಎಂಬವರು ಮಲ್ಪೆ ಉದ್ದಿನಹಿತ್ಲು ಎಂಬಲ್ಲಿ ಮಧ್ವನಗರ ನಿವಾಸಿ ಚೇತನ್ ಎಂಬವರ ಜಾಗದಲ್ಲಿ ಬಾವಿ ನಿರ್ಮಾಣ ಕೆಲಸಕ್ಕೆಂದು ಕಾರ್ಕಳ ಬಸ್ ನಿಲ್ದಾಣದ ಬಳಿಯಿಂದ ಕೊಪ್ಪಳ ಜಿಲ್ಲೆಯ 5 ಜನ ಕೂಲಿ ಕಾರ್ಮಿಕರನ್ನು ಕರೆತಂದಿದ್ದರು.
ಮೇ 21ರಂದು ಬಾವಿಯಿಂದ ಮಣ್ಣು ತೆಗೆಯುವ ಕೆಲಸ ಪ್ರಾರಂಭಿಸಿದ್ದು, ಮೇ 22ರಂದು ಸಂಜೆ 5 ಗಂಟೆ ಸುಮಾರಿಗೆ ಕೆಲಸ ಬಿಡುವ ಸಮಯಕ್ಕೆ ರಮೇಶ ಎಂಬಾತ ಬಾವಿಯಲ್ಲಿ ಮಣ್ಣು ತೆಗೆಯುವ ಕೆಲಸ ಮುಂದುವರಿಸಿದ್ದ. ಈ ವೇಳೆ ಬಾವಿಯ ದಂಡೆಯ ಮಣ್ಣು ಒಮ್ಮೆಲೆ ರಮೇಶನ ಮೈಮೇಲೆ ಕುಸಿದು ಬಿದ್ದಿದ್ದು, ಸ್ಥಳದಲ್ಲೇ ಮಣ್ಣಿನಲ್ಲಿ ಹೂತು ಹೋಗಿದ್ದಾನೆ. ಕೂಡಲೇ ಸ್ಥಳದಲ್ಲಿ ಅಗ್ನಿಶಾಮಕ ಠಾಣಾ ಸಿಬ್ಬಂದಿಯಿಂದ ಸ್ಥಳೀಯರ ಸಹಕಾರದಲ್ಲಿ ತುರ್ತು ಕಾರ್ಯಾಚರಣೆ ನಡೆಸಲಾಗಿದೆ.
ಜೆಸಿಬಿ ಹಾಗೂ ಕಾರ್ಮಿಕರನ್ನು ಬಳಸಿ ಮಣ್ಣು ತೆರವುಗೊಳಿಸಲಾಗಿದ್ದು, ರಾತ್ರಿಯವರೆಗೆ ಕಾರ್ಯಾಚರಣೆ ನಡೆಸಿದರೂ ಮೃತದೇಹ ಮಾತ್ರ ಸಿಕ್ಕಿಲ್ಲ. ಯುವಕನ ಮೃತದೇಹಕ್ಕಾಗಿ ಶನಿವಾರ ಮತ್ತೆ ಬೆಳಗ್ಗಿನಿಂದಲೇ ಕಾರ್ಯಚರಣೆ ನಡೆಸಲು ನಿರ್ಧರಿಸಲಾಗಿದೆ. ಸ್ಥಳಕ್ಕೆ ಶಾಸಕ ಯಶ್‌ಪಾಲ್ ಸುವರ್ಣ ಸೇರಿದಂತೆ ಹಲವು ಮುಖಂಡರು ಭೇಟಿ ನೀಡಿ ಅಧಿಕಾರಿಗಳಿಂದ ಕಾರ್ಯಾಚರಣೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಈ ಘಟನೆ ಸಂಬಂಧಿಸಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
