Ankola| ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದ ಆರೋಪದ ಹಿನ್ನೆಲೆ ಅಂಕೋಲಾ ಪೊಲೀಸ್ ಠಾಣಾ ವ್ಯಾಪ್ತಿಯ ವ್ಯಕ್ತಿಯೊಬ್ಬನನ್ನು ಆರು ತಿಂಗಳ ಅವಧಿಗೆ ಉತ್ತರ ಕನ್ನಡ ಜಿಲ್ಲೆಯಿಂದ ಕಲಬುರ್ಗಿ ಜಿಲ್ಲೆಗೆ ಗಡಿಪಾರು ಮಾಡಿ ಆದೇಶ ಹೊರಡಿಸಲಾಗಿದೆ.

ಅಂಕೋಲಾದ ಕಸಬಕೇಣಿ ನಿವಾಸಿ ಶ್ಯಾಮ್ @ ಶ್ಯಾಮಸುಂದರ ಗೋಪಿನಾಥ ಭಂಟ್ (41) ಎಂಬುವವನೇ ಕಲಬುರ್ಗಿಗೆ ಗಡಿಪಾರಾದ ಆಸಾಮಿ. ಈತನ
ವಿರುದ್ಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ ವಿವಿಧ ಅವಧಿಗಳಲ್ಲಿ ಒಟ್ಟು ಹತ್ತು ಪ್ರಕರಣಗಳು ದಾಖಲಾಗಿದ್ದವು. ಈ ಹಿನ್ನೆಲೆಯಲ್ಲಿ ಆತನ ಚಟುವಟಿಕೆಗಳ ಮೇಲೆ ಪೊಲೀಸರು ನಿಗಾ ವಹಿಸಿದ್ದರು. ಆದರೂ ಆತ ಕಾನೂನುಬಾಹಿರ ಚಟುವಟಿಕೆಗಳನ್ನು ಈತ ಮುಂದುವರಿಸಿದ್ದ ಎನ್ನಲಾಗಿದೆ.

ಈ ಹಿನ್ನೆಲೆ ಅಂಕೋಲಾ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರು, ಆರೋಪಿಯನ್ನು ಗಡಿಪಾರು ಮಾಡುವ ಕುರಿತು ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ವಿವರವಾದ ಪ್ರಸ್ತಾವನೆ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕರು, ಎರಡೂ ಪಕ್ಷಗಳ ವಾದ ಆಲಿಸಿ ಸಮಗ್ರ ಪರಿಶೀಲನೆ ನಡೆಸಿದ ಬಳಿಕ ಗಡಿಪಾರು ಅಗತ್ಯವೆಂದು ಕಂಡು, ಕರ್ನಾಟಕ ಪೊಲೀಸ್ ಕಾಯ್ದೆ 1963ರ ಕಲಂ 55(ಎ) ಅಡಿಯಲ್ಲಿ ಮೇ 7ರಂದು ಆದೇಶ ಹೊರಡಿಸಿದ್ದಾರೆ.

ಆದೇಶದಂತೆ ಶ್ಯಾಮ್ @ ಶ್ಯಾಮಸುಂದರ ಭಂಟನನ್ನು ತಕ್ಷಣದಿಂದ ಜಾರಿಗೆ ಬರುವಂತೆ ಆರು ತಿಂಗಳ ಕಾಲ ಉತ್ತರ ಕನ್ನಡ ಜಿಲ್ಲೆಯಿಂದ ಕಲಬುರ್ಗಿ ನಗರ ಜಿಲ್ಲೆಯ ಚೌಕ ಪೊಲೀಸ್ ಠಾಣಾ ವ್ಯಾಪ್ತಿಗೆ ಗಡಿಪಾರು ಮಾಡಲಾಗಿದೆ. ಅಂಕೋಲಾ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಆರೋಪಿಯನ್ನು ಕಲಬುರ್ಗಿ ಚೌಕ ಪೊಲೀಸ್ ಠಾಣೆಯ ಅಧಿಕಾರಿಗಳ ಮುಂದೆ ಹಾಜರುಪಡಿಸಿದ್ದಾರೆ.