Middle East|Conflict|fuel Price|ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆ ಇಂಧನ ಕೊರತೆ ಹಾಗೂ ಬೆಲೆ ಏರಿಕೆಯ ಭೀತಿಯಿಂದ ಉತ್ತರಕ‌ನ್ನಡ ಜಿಲ್ಲೆಯ ಭಟ್ಕಳ ಸೇರಿದಂತೆ ಜಿಲ್ಲೆಯ ಹಲವು ಪೆಟ್ರೋಲ್ ಬಂಕ್‌ಗಳಲ್ಲಿ ವಾಹನಗಳ ದೀರ್ಘ ಸಾಲು ಕಂಡುಬರುತ್ತಿವೆ.

ಸ್ಥಳೀಯರು ತಮ್ಮ ವಾಹನಗಳಿಗೆ ಪೆಟ್ರೋಲ್ ತುಂಬಿಸುವುದರ ಜೊತೆಗೆ ಮುನ್ನೆಚ್ಚರಿಕೆಯಾಗಿ ಬಾಟಲಿಗಳಲ್ಲಿಯೂ ಸಹ ಪೆಟ್ರೋಲ್ ಸಂಗ್ರಹಿಸಿ ಕೊಂಡೊಯ್ಯುತ್ತಿದ್ದಾರೆ.

ಕೆಲವು ಕಡೆಗಳಲ್ಲಂತೂ ನಿನ್ನೆ ರಾತ್ರಿಯೇ ಸಾಕಷ್ಟು ಸಂಖ್ಯೆಯಲ್ಲಿ ಪೆಟ್ರೋಲ್ ಬಂಕ್‌ಗೆ ತೆರಳಿ ಪೆಟ್ರೋಲ್, ಡೀಸೆಲ್ ಹಾಕಿಸಿ, ಬಾಟಲಿ, ಕ್ಯಾನ್‌ಗಳಲ್ಲಿ ತುಂಬಿಸಿಕೊಂಡು ತೆರಳಿದ್ದಾರೆ.

ಅಮೆರಿಕಾ ಮತ್ತು ಇಸ್ರೇಲ್ ದೇಶಗಳು ಇರಾನ್ ಮೇಲೆ ನಡೆಸಿದ ದಾಳಿಗಳು ಹಾಗೂ ಅದಕ್ಕೆ ಪ್ರತಿಯಾಗಿ ಇರಾನ್ ಕೈಗೊಂಡ ಕ್ರಮಗಳ ಪರಿಣಾಮವಾಗಿ ಜಾಗತಿಕ ಕಚ್ಚಾ ತೈಲ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಬಹುದು ಎಂಬ ಆತಂಕ ಜನರಲ್ಲಿ ಕಾಣಿಸಿಕೊಂಡಿದೆ.

ಪರ್ಶಿಯನ್ ಕೊಲ್ಲಿಯನ್ನು ಓಮಾನ್ ಕೊಲ್ಲಿಯೊಂದಿಗೆ ಸಂಪರ್ಕಿಸುವ ಪ್ರಮುಖ ತೈಲ ಸಾಗಣೆ ಮಾರ್ಗವಾದ ಹೋರ್ಮುಜ್ ಕಣಿವೆಯ ಸಮುದ್ರ ಮಾರ್ಗ ಸಂಚಾರಕ್ಕೆ ಇರಾನ್ ನಿರ್ಬಂಧ ಹೇರಿದೆ‌‌. ಜಗತ್ತಿನ ದೊಡ್ಡ ಪ್ರಮಾಣದ ಕಚ್ಚಾ ತೈಲ ಸಾಗಣೆ ಇದೇ 3 ಕಿ.ಮೀ. ವ್ಯಾಪ್ತಿಯ ಕಿರಿದಾದ ಸಮುದ್ರ ಮಾರ್ಗದ ಮೂಲಕ ಸಾಗುವುದರಿಂದ ಇಲ್ಲಿ ಉಂಟಾಗುವ ಯಾವುದೇ ಅಡಚಣೆ ಜಾಗತಿಕ ಇಂಧನ ಮಾರುಕಟ್ಟೆಗೆ ತಕ್ಷಣದ ಪರಿಣಾಮ ಬೀರುವ ಸಾಧ್ಯತೆ ಎನ್ನಲಾಗಿದೆ.

ಈ ಬೆಳವಣಿಗೆಯ ಬಳಿಕ ಬ್ರೆಂಟ್ ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ 85 ಡಾಲರ್ ಮೀರಿದ್ದು, ಇದು ಸತತ ಮೂರನೇ ದಿನದ ಏರಿಕೆಯಾಗಿರುವುದಾಗಿ ವರದಿಯಾಗಿದೆ.

ಮಧ್ಯಪ್ರಾಚ್ಯದಲ್ಲಿ ಕಾಣುತ್ತಿರುವ ಉದ್ವಿಗ್ನತೆಯ ಆತಂಕದಿಂದ ಜನರು ಹೆಚ್ಚಾಗಿ ಪೆಟ್ರೋಲ್ ಖರೀದಿಸುವುದು ಅಥವಾ ಸಂಗ್ರಹಿಸುವುದು ಸ್ಥಳೀಯ ಮಟ್ಟದಲ್ಲಿ ಕೃತಕ ಕೊರತೆಯನ್ನು ಉಂಟುಮಾಡುವ ಸಾಧ್ಯತೆ ಇದೆ ಎಂದು ತಜ್ಞರು ತಿಳಿಸಿದ್ದಾರೆ. ಸದ್ಯಕ್ಕೆ ಇಂಧನ ಸರಬರಾಜಿನಲ್ಲಿ ಯಾವುದೇ ವ್ಯತ್ಯಯ ಕಂಡುಬಂದಿಲ್ಲದಿದ್ದರೂ ಮಧ್ಯಪ್ರಾಚ್ಯದ ಬೆಳವಣಿಗೆಗಳು ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಹಾಗೂ ಜನರಲ್ಲಿ ಆತಂಕದ ವಾತಾವರಣ ಸೃಷ್ಟಿಸಿರುವುದಂತು ಸತ್ಯ.