ಉಡುಪಿ: ಜಿಲ್ಲಾ ಧಿಕಾರಿ ಕಚೇರಿಯಲ್ಲಿ ಗ್ರಾಮ ಸಹಾಯಕರಾಗಿ ಕೆಲಸ ಮಾಡುತ್ತಿದ್ದ ಸಿಬಂದಿ ಕಬ್ಬಿಣದ ಕೊಕ್ಕೆ ಹಿಡಿದು ಕಚೇರಿಯ ಹಿಂಬದಿ ಇರುವ ಮಾವಿನ ಮರದಿಂದ ಹಣ್ಣುಗಳನ್ನು ಕೊಯ್ಯುತ್ತಿದ್ದಾಗ ಹೈ ಟೆನ್ಸನ್ ವಿದ್ಯುತ್ ತಂತಿ ತಗಲಿ ಶಾಕ್ ಹೊಡೆದು ಸಾವನ್ನಪ್ಪಿದ ಘಟನೆ ಎ.24ರಂದು ಸಂಭವಿಸಿದೆ.

ಅಲೆವೂರು ನಿವಾಸಿ ಸದಾನಂದ (54) ಮೃತ ವ್ಯಕ್ತಿಯಾಗಿದ್ದು, ಕಳೆದ 30 ವರ್ಷಗಳಿಂದಲೂ ಹೆಚ್ಚು ಸಮಯಗಳಿಂದ ಗ್ರಾಮ ಸಹಾಯಕರಾಗಿ ಕೆಲಸ‌ ಮಾಡುತ್ತಿದ್ದರು. ಶುಕ್ರವಾರ ಬೆಳಗ್ಗೆ 9.15ಕ್ಕೆ ಜಿಲ್ಲಾಧಿಕಾರಿ ಕಚೇರಿಯ ಹಿಂಭಾಗದಲ್ಲಿ ವಾಹನಗಳನ್ನು ನಿಲ್ಲಿಸುವ ಶೆಡ್ ಬಳಿಯಿರುವ ಮಾವಿನ ಮರಕ್ಕೆ ಹತ್ತಿ ಕಬ್ಬಿಣದ ಕೊಕ್ಕೆ ಬಳಸಿ ಹಣ್ಣುಗಳನ್ನು ಕೊಯ್ಯುತ್ತಿದ್ದರು.

ಈ ವೇಳೆ ಮರದ ಮೇಲ್ಬಾಗದಿಂದ ಹಾದು ಹೋಗಿರುವ ಹೈ ಟೆನ್ಸನ್ ವಿದ್ಯುತ್ ತಂತಿ ಕಬ್ಬಿಣದ ಕೊಕೈಗೆ ತಾಗಿದ್ದು, ವಿದ್ಯುತ್ ಶಾಕ್‌ನಿಂದ ಕಬ್ಬಿಣದ ಕೊಕ್ಕೆ ಸಹಿತ ಮರದ ಕೊಂಬೆ ಮೇಲೆ ಬಿದ್ದಿದ್ದರು. ಈ ವೇಳೆ ಅವರ ಕುತ್ತಿಗೆಯ ಹಿಂಭಾಗ ಮರದ ಪಕ್ಕದಲ್ಲಿದ್ದ ಕಂಪೌಂಡ್ ಮೇಲೆ ಹಾಕಲಾಗಿದ್ದ ಕಬ್ಬಿಣದ ಗ್ರಿಲ್‌ಗೆ ಬಡಿದಿತ್ತು.

ಬೆಳಗ್ಗೆ ಕಾರು ಚಾಲಕ ಮಲ್ಪೆ ಕೊಡವೂರು ಗ್ರಾಮದ ಅರುಣ್ ಎಸ್. ಸುವರ್ಣ ಈ ದೃಶ್ಯವನ್ನು ನೋಡಿ ಇತರರಿಗೆ ತಿಳಿಸಿದ್ದರು.‌ ಕೂಡಲೇ ಪೊಲೀಸರು, ಅಗ್ನಿಶಾಮಕದಳ ಸ್ಥಳಕ್ಕಾಗಮಿಸಿ ಕಬ್ಬಿಣದ ಕೊಕೈಯನ್ನು ಸರಿಸಿ, ಸದಾನಂದ ಅವರನ್ನು ಕೆಳಕ್ಕಿಳಿಸಿ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸದಾನಂದ ಮೃತಪಟ್ಟಿದ್ದಾರೆ. ವಿದ್ಯುತ್ ಶಾಕ್‌ ನಿಂದಾಗಿ ಸದಾನಂದ ಅವರ ಕೈ ಹಾಗೂ ಕಾಲು ಬೆರಳುಗಳ ಸಂದುಗಳಲ್ಲಿ ಬಿರುಕುಗಳು ಕಾಣಿಸಿತ್ತು ಎನ್ನಲಾಗಿದೆ.

ಈ ಘಟನೆಯ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದಾನಂದ ಅವರಿಗೆ ಸಕ್ಕರೆ ಕಾಯಿಲೆ ಇದ್ದದ್ದರಿಂದ ಅವರು ಖುದ್ದಾಗಿ ಮಾವಿನ ಹಣ್ಣುಗಳನ್ನು ತಿನ್ನುತ್ತಿರಲಿಲ್ಲ. ಪ್ರತೀ ಬಾರಿ ತನ್ನ ಕಚೇರಿ ಸಿಬಂದಿಗಾಗಿ ಮಾವಿನ ಹಣ್ಣುಗಳನ್ನು ಕೊಯ್ದು ಹಂಚುತ್ತಿದ್ದರು. ಅವರ ಈ ಗುಣವೇ ಜೀವಕ್ಕೆ ಮುಳುವಾಯಿತು ಎಂದಿದ್ದಾರೆ ಕಚೇರಿ ಸಿಬಂದಿ.