ರಾತ್ರಿ ಸಮಯದಲ್ಲಿ ದೇವಸ್ಥಾನದ ಬೀಗ ಮುರಿದು ದೇವರ ಮೂರ್ತಿಯ ಮೇಲಿದ್ದ ಚಿನ್ನ ಹಾಗೂ ಬೆಳ್ಳಿಯ ಆಭರಣವನ್ನು ಕಳ್ಳ ತನ ಮಾಡಿದ ಘಟನೆ ಕಾರವಾರ ತಾಲೂಕಿನ ಕೆಳಗಿನ ಮಖೇರಿಯ ಶೆಜವಾಡದ ನವದುರ್ಗಾ ಗಿಂಡಿ ದೇವಸ್ಥಾನದಲ್ಲಿ ನಡೆದಿದೆ.
ಬೀಗ ಮುರಿದು ದೇವಸ್ಥಾನ ಪ್ರವೇಶಿಸಿದ ಕಳ್ಳರು ನವದುರ್ಗಾ ದೇವಿಯ ಕುತ್ತಿಗೆಯಲ್ಲಿದ್ದ 10 ಗ್ರಾಂ ಬೆಳ್ಳಿ ಸರ ಹಾಗೂ ಒಂದು ಗ್ರಾಮ್ ತೂಕದ ಬಂಗಾರದ ಲಾಕೇಟ್ ಇರುವ ಎರಡು ಕರಿಮಣಿ ಮಾಂಗಲ್ಯ ವನ್ನು ಕದ್ದು ಪರಾರಿಯಾಗಿದ್ದಾರೆ.
ಈ ಕುರಿತು ಸ್ಥಳೀಯರಾದ ಮಹೇಂದ್ರ ಕುಶಾಲಿ ಬಾಂದೇಕರ್ ಅವರು ಕಾರವಾರ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದು ದೇವರ ವಿಗ್ರಹದ ಮೇಲಿದ್ಧ ಆಭರಣ ಹೊತ್ತೊಯ್ದ ಕಳ್ಳರ ಶೋಧಕ್ಕಾಗಿ ಪೊಲೀಸರು ತನಿಖೆ ನಡೆಸುತಿದ್ದಾರೆ.
ಇತ್ತೀಚಿಗೆ ದೇವಾಲಯ ದರೋಡೆ ಪ್ರಕರಣಗಳು ಜಾಸ್ತಿಯಾಗುತ್ತಿದ್ದು, ಈ ಹಿಂದೆ ಅಮದಳ್ಳಿ ಗಣಪತಿ ದೇವಸ್ಥಾನ, ಕಾರವಾರದ ಸಾಯಿ ಮಂದಿರ ಕಳ್ಳತನ ಪ್ರಕರಣಗಳು ನಡೆದಿದ್ದವು.
ಆದಷ್ಟು ಬೇಗ ಪೊಲೀಸರು ದೇವರ ಮಾಂಗಲ್ಯ ಕದ್ದ ಕಳ್ಳರನ್ನು ಹಿಡಿಯಲಿ ಹಾಗೂ ಗ್ರಾಮೀಣ ಪ್ರದೇಶದಲ್ಲಿ ರಾತ್ರಿ ಪೊಲೀಸ್ ಬೀಟ್ ಹೆಚ್ಚಾಗಿ ಇರಲಿ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
