ಟಿ-20 ವಿಶ್ವಕಪ್ 2026ರ ಪಂದ್ಯಾವಳಿಯಲ್ಲಿ ಹಿಂದಿನ ಪಂದ್ಯದಲ್ಲಿ ಸೌತ್ ಆಫ್ರಿಕಾ ಮುಂದೆ ಸೋಲುಂಡಿದ್ದ ಇಂಡಿಯಾ ತಂಡ ಇಂದು ತನ್ನ ಎದುರಾಳಿ ಜಿಂಬಾಬ್ವೆ ವಿರುದ್ಧ 72 ರನ್‌ಗಳ ಭಾರೀ ಗೆಲುವು ದಾಖಲಿಸಿದೆ.
ಕಳೆದ 2-3 ಮ್ಯಾಚ್‌ಗಳಲ್ಲಿ ಕಳಪೆ ಫಾರ್ಮ್‌ನಲ್ಲಿದ್ದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಇಂದು ಭರ್ಜರಿ ಬ್ಯಾಟ್ ಬೀಸೋ ಮೂಲಕ 30 ಬೌಲಿಗೆ 55 ಬೀಸಿದರೆ, ಸ್ಕೋರ್ ಗಳಿಸಲು ಪರದಾಡ್ತಿದ್ದ ತಿಲಕ್ ವರ್ಮಾ 16 ಬೌಲಿಗೆ ಬರೋಬ್ಬರಿ 44 ರನ್ ಬಾರಿಸಿದ್ದಾರೆ.

ಮೊದಲು ಬ್ಯಾಟಿಗಿಳಿದ ಸಂಜು ಸ್ಯಾಮ್ಸನ್ 15 ಬೌಲಿಗೆ 24 ರನ್, ಮೂರನೇ ಬ್ಯಾಟ್ಸ್‌ಮನ್ ಇಶಾನ್ ಕಿಶನ್ 24 ಬೌಲಿಗೆ 38 ರನ್, ತಂಡದ ನಾಯಕ ಸೂರ್ಯಕುಮಾರ್ ಯಾದವ್ 13 ಬೌಲಿಗೆ 33 ರನ್ ಗಳಿಸಿದರೆ, ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅಂತೂ 23 ಬೌಲಿಗೆ 50 ರನ್ ಬಾರಿಸುವ ಮೂಲಕ ಎಲ್ಲರೂ 20 ಓವರ್‌ಗೆ 4 ವಿಕೆಟ್ ಕಳೆದುಕೊಂಡು 256 ರನ್‌ಗಳ ದೊಡ್ಡ ಕೋಟೆ ಕಟ್ಟಿದ್ದರು. ಇನ್ನು ಬೌಲಿಂಗ್‌ನಲ್ಲೂ ಟೀಂ ಇಂಡಿಯಾದ ಬೌಲರ್‌ಗಳು ಜಿಂಬಾಬ್ವೆಯನ್ನು ಕಟ್ಟಿ ಹಾಕಿದ್ದು, ಅರ್ಶದೀಪ್ ಸಿಂಗ್ 3 ವಿಕೆಟ್ ಹಾರಿಸಿದ್ರೆ, ವರುಣ್ ಚಕ್ರವರ್ತಿ, ಅಕ್ಸರ್ ಪಟೇಲ್ ಹಾಗೂ ಶಿವಮ್ ದುಬೆ ತಲಾ 1 ವಿಕೆಟ್ ಪಡೆಯುವ ಮೂಲಕ ಸಮಾಧಾನಪಟ್ಟುಕೊಂಡರು.
ಟೀಂ ಇಂಡಿಯಾ ನೀಡಿದ ದೊಡ್ಡ ಟಾರ್ಗೆಟ್ ಅನ್ನು ಚೇಸ್ ಮಾಡಲು ಜಿಂಬಾಬ್ವೆಯ ಆರಂಭಿಕ ಆಟಗಾರ ಬ್ರಿಯಾನ್ ಬೆನ್ನೆಟ್ ಯರ್ರಾಬಿರ್ರಿ ಬ್ಯಾಟ್ ಬೀಸುವ ಮೂಲಕ 59 ಬೌಲಿಗೆ 97 ರನ್ ಬಾರಿಸಿ ಕೊನೆಯವರೆಗೂ ನಾಟ್ ಔಟ್ ಆಗಿದ್ರು. ಆದರೆ, ಜಿಂಬಾಬ್ವೆಯ ಕ್ಯಾಪ್ಟನ್ ಸಿಕಂದರ್ ರಝಾ 21 ಬೌಲಿಗೆ 31 ರನ್, ತಡಿವಾನಶೆ ಮರುಮಾನಿ 20 ಬೌಲಿಗೆ 20 ರನ್ ಗಳಿಸಿದ್ದು ಬಿಟ್ರೆ, ಡಿಯಾನ್ ಮಯೆರ್ಸ್ 6 ರನ್, ರಿಯಾನ್ ಬರ್ಲ್ 0, ಟೋನಿ ಮುನಿಯೋಂಗಾ 11, ಟಿ ಮುಸೆಕಿವಾ 7, ಬ್ರ್ಯಾಡ್ ಇವಾನ್ಸ್ 1 ರನ್ ಗಳಿಸುವ ಮೂಲಕ ಬರೋಬ್ಬರಿ 6 ವಿಕೆಟ್ ಕಳೆದುಕೊಂಡು 184 ರನ್‌ಗಳನ್ನು ಮಾತ್ರ ಪೇರಿಸಲು ಸಮರ್ಥರಾದರು.

ಸದ್ಯ ಜಿಂಬಾಬ್ವೆಯನ್ನು ದೊಡ್ಡ ಮೊತ್ತದಲ್ಲಿ ಸೋಲಿಸಿದ ಟೀಂ ಇಂಡಿಯಾ ಸೆಮಿಫೈನಲ್ ಹಂತವನ್ನು ತಲುಪಲು ತಾವು ಸಮರ್ಥರಿದ್ದೇವೆ ಎಂದು ತೋರಿಸಿಕೊಟ್ಟಿದೆ. ಆದರೆ, ಇಂಡಿಯಾದ ಮುಂದೆ ಮತ್ತಷ್ಟು ಟಾರ್ಗೆಟ್‌ಗಳಿದ್ದು, ಅವುಗಳ ಮುಂದೆ ಗೆಲುವು ಸಾಧಿಸಿ ಈ ಬಾರಿ ವಿಶ್ವಕಪ್ ಅನ್ನು ಮತ್ತೆ ತನ್ನ ಮಡಿಲಿಗೆ ಸೇರಿಸಿಕೊಳ್ಳಲಿದೆಯೇ ಎಂದು ಕಾದು ನೋಡಬೇಕಷ್ಟೇ.
