Karwar| ಜಿಲ್ಲೆಯ ಭಟ್ಕಳದಲ್ಲಿ ಭಾನುವಾರ ಸಮುದ್ರಕ್ಕೆ ಕಪ್ಪೆ ಚಿಪ್ಪು ಹಿಡಿಯಲು ಹೋಗಿದ್ದ ಮೀನುಗಾರರು ಮೃತಪಟ್ಟ ದುರಂತ ತಿಳಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತೀವ್ರ ಆಘಾತ ಮತ್ತು ಸಂತಾಪ ವ್ಯಕ್ತಪಡಿಸಿದ್ದಾರೆ. ಸಂತ್ರಸ್ತರ ಕಷ್ಟಕ್ಕೆ ತಕ್ಷಣವೇ ಸ್ಪಂದಿಸಿರುವ ಅವರು, ಪ್ರಧಾನಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ (PMNRF) ತುರ್ತು ಆರ್ಥಿಕ ನೆರವನ್ನು ಘೋಷಿಸಿದ್ದಾರೆ.

​ದುರಂತದಲ್ಲಿ ಮೃತಪಟ್ಟವರ ವಾರಸುದಾರರಿಗೆ ತಲಾ 2 ಲಕ್ಷ ರೂಪಾಯಿ ಹಾಗೂ ತೀವ್ರವಾಗಿ ಗಾಯಗೊಂಡವರಿಗೆ ತಲಾ 50 ಸಾವಿರ ರೂಪಾಯಿಗಳ ಪರಿಹಾರ ಧನವನ್ನು ಪ್ರಧಾನಿ ಕಾರ್ಯಾಲಯ (PMO) ಪ್ರಕಟಿಸಿದೆ.

​ಈ ಕುರಿತು ಕಂಬನಿ ಮಿಡಿದಿರುವ ಪ್ರಧಾನಿ ನರೇಂದ್ರ ಮೋದಿ ಅವರು, “ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿ ಸಂಭವಿಸಿದ ದುರಂತದ ಬಗ್ಗೆ ಕೇಳಿ ತೀವ್ರ ಆಘಾತವಾಯಿತು. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳ ದುಃಖದಲ್ಲಿ ನಾನು ಭಾಗಿಯಾಗಿದ್ದೇನೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ” ಎಂದಿದ್ದಾರೆ.

ದೇಶದ ಯಾವುದೇ ಮೂಲೆಯಲ್ಲಿ ಇಂತಹ ದುರದೃಷ್ಟಕರ ಘಟನೆಗಳು ಸಂಭವಿಸಿದಾಗ ಸಂತ್ರಸ್ತರ ಸಂಕಷ್ಟಕ್ಕೆ ತಕ್ಷಣವೇ ನೆರವಾಗುವುದು ನಮ್ಮ ಸರ್ಕಾರದ ಮೊದಲ ಆದ್ಯತೆಯಾಗಿದೆ. ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಧೈರ್ಯ ತುಂಬುವುದು ಸರ್ಕಾರದ ಕರ್ತವ್ಯವಾಗಿದೆ. ಈ ಹಿನ್ನೆಲೆಯಲ್ಲಿ ಮೃತರ ವಾರಸುದಾರರಿಗೆ ಹಾಗೂ ಗಾಯಗೊಂಡವರಿಗೆ ಪ್ರಧಾನಮಂತ್ರಿ ಪರಿಹಾರ ನಿಧಿ (PMNRF) ವತಿಯಿಂದ ತಕ್ಷಣವೇ ಪರಿಹಾರ ಹಣ ಬಿಡುಗಡೆಯಾಗಲಿದೆ ಎಂದು ಹೇಳಿದ್ದಾರೆ.

ಇನ್ನು ​ದುರಂತ ನಡೆದ ಬೆನ್ನಲ್ಲೇ ಪರಿಸ್ಥಿತಿಯನ್ನು ಅವಲೋಕಿಸಿ, ಸಂತ್ರಸ್ತರ ನೋವಿಗೆ ಸ್ಪಂದಿಸಿ ತಕ್ಷಣವೇ ಪರಿಹಾರ ಘೋಷಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಉತ್ತರ ಕನ್ನಡ ಜಿಲ್ಲೆಯ ಜನತೆಯ ಪರವಾಗಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.