Dandeli| ಇಲ್ಲಿನ ಸಮೀಪದ ಅಂಬೇವಾಡಿ-ಬರ್ಚಿ ರಸ್ತೆಯಲ್ಲಿ ನಸುಕಿನ ವೇಳೆ ಕಾಡಾನೆಯೊಂದು ರಸ್ತೆಯಲ್ಲಿ ಕಾಣಿಸಿಕೊಂಡು ಕೆಲಕಾಲ ಆತಂಕದ ವಾತಾವರಣ ಸೃಷ್ಟಿಸಿತು.

ಅರಣ್ಯ ಪ್ರದೇಶದಿಂದ ಆಹಾರ ಅರಸಿ ರಸ್ತೆ ಸಮೀಪಕ್ಕೆ ಬಂದಿದ್ದ ಕಾಡಾನೆಯನ್ನು ಕಂಡ ವಾಹನ ಸವಾರರು ಎಚ್ಚರಿಕೆಯಿಂದ ಸಂಚರಿಸಿದರು. ಗಣೇಶಗುಡಿ-ದಾಂಡೇಲಿ ಮಾರ್ಗದಲ್ಲಿ ಕಾಡಾನೆಯ ದರ್ಶನವಾಗಿದ್ದು, ಕೆಲವರು ತಮ್ಮ ವಾಹನಗಳನ್ನು ನಿಧಾನಗತಿಯಲ್ಲಿ ಚಲಾಯಿಸಿ ಸುರಕ್ಷಿತವಾಗಿ ಮುಂದುವರಿದರು.

ಕಾಡಾನೆ ರಸ್ತೆ ಬದಿಯಲ್ಲಿ ನಿಂತಿದ್ದ ದೃಶ್ಯವನ್ನು ಕೆಲವರು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ಅದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆ ಹಿನ್ನೆಲೆಯಲ್ಲಿ ಸ್ಥಳೀಯರು ಹಾಗೂ ವಾಹನ ಸವಾರರು ಎಚ್ಚರಿಕೆಯಿಂದ ಸಂಚರಿಸುವಂತೆ ಸೂಚಿಸಲಾಗಿದೆ.

ದಾಂಡೇಲಿ ಸುತ್ತಮುತ್ತಲಿನ ಅರಣ್ಯ ಪ್ರದೇಶಗಳಲ್ಲಿ ಇತ್ತೀಚಿನ ದಿನಗಳಲ್ಲಿ ಕಾಡಾನೆಗಳ ಸಂಚಾರ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ, ರಸ್ತೆ ಬಳಿಯ ಪ್ರದೇಶಗಳಲ್ಲಿ ಎಚ್ಚರಿಕೆ ವಹಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ. ಕಾಡುಪ್ರಾಣಿಗಳ ಸಮೀಪ ಹೋಗುವುದು, ಅವುಗಳನ್ನು ಕೆಣಕುವುದು ಅಥವಾ ಫೋಟೊ ತೆಗೆಯಲು ವಾಹನ ನಿಲ್ಲಿಸುವುದು ಅಪಾಯಕಾರಿ ಎಂದು ಅಧಿಕಾರಿಗಳು ಎಚ್ಸರಿಸಿದ್ದಾರೆ.