Sirsi| ನಗರದ ಗಣೇಶನಗರದ ಎರಡನೇ ವಾರ್ಡಿನ ಐದನೆಯ ಕ್ರಾಸ್‌ನಲ್ಲಿ ಮಧ್ಯರಾತ್ರಿ ಸುರಿದ ಭಾರೀ ಮಳೆಯಿಂದ ಇಡೀ ರಸ್ತೆ ಕುಸಿದು ಹೋಗಿದ್ದು, ಸ್ಥಳೀಯರಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿದೆ. ಗಟಾರ ವ್ಯವಸ್ಥೆ ಇಲ್ಲದ ಕಾರಣ ಮಳೆಯ ನೀರು ರಸ್ತೆ ಮೇಲೆ ಹರಿದು ಹೋಗಿ ರಸ್ತೆ ಸಂಪೂರ್ಣ ಕೊಚ್ಚಿಹೋಗಿದ್ದು, ತಡೆಗೋಡೆ ಕೂಡಾ ಕುಸಿದು ಬೀಳುವ ಭೀತಿ ಎದುರಾಗಿದೆ.

ಈ ಭಾಗದ ನಿವಾಸಿಗಳು ಹಲವು ವರ್ಷಗಳಿಂದ ಸರಿಯಾದ ರಸ್ತೆ ಹಾಗೂ ಗಟಾರ ವ್ಯವಸ್ಥೆ ಇಲ್ಲದೇ ಸಮಸ್ಯೆಯ ಜತೆಯೇ ಜೀವನ ನಡೆಸುತ್ತಿದ್ದರು. ಕೆಲವು ತಿಂಗಳ ಹಿಂದೆ ಶಾಸಕ ಭೀಮಣ್ಣ ನಾಯ್ಕ ಸ್ಥಳಕ್ಕೆ ಭೇಟಿ ನೀಡಿ ಅಲ್ಲಿನ ದುಸ್ಥಿತಿ ಪರಿಶೀಲಿಸಿ ತಕ್ಷಣ ರಸ್ತೆ, ಗಟಾರ ಹಾಗೂ ತಡೆಗೋಡೆ ನಿರ್ಮಾಣಕ್ಕೆ ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಅದರಂತೆ ಮೊದಲ ಹಂತದಲ್ಲಿ ತಡೆಗೋಡೆ ನಿರ್ಮಿಸಿ ರಸ್ತೆ ಮೇಲೆ ಮಣ್ಣು ಹಾಕಲಾಗಿತ್ತು. ಆದರೆ, ಸ್ಥಳೀಯರ ಆರೋಪದಂತೆ ಕಳಪೆ ಕಾಮಗಾರಿ, ನಿರ್ಲಕ್ಷ್ಯ ಹಾಗೂ ಗಟಾರದ ಕೊರತೆಯೇ ಇದೀಗ ರಸ್ತೆ ಕುಸಿತಕ್ಕೆ ಕಾರಣವಾಗಿದೆ.

ಭಾರೀ ಮಳೆಯಿಂದ ರಸ್ತೆ ಸಂಪೂರ್ಣ ಕೊಚ್ಚಿಹೋಗಿದ್ದು, ಅಲ್ಲೇ ನಿಲ್ಲಿಸಲಾಗಿದ್ದ ಓಮಿನಿ ವಾಹನವೂ ಮಣ್ಣಲ್ಲಿ ಸಿಲುಕಿದೆ. ಮಳೆ ಇದೇ ರೀತಿ ಮುಂದುವರಿದರೆ ತಡೆಗೋಡೆ ಸಂಪೂರ್ಣ ಕುಸಿದು ಸಮೀಪದ ಏಳೆಂಟು ಮನೆಗಳಿಗೆ ಹಾನಿಯಾಗುವ ಸಾಧ್ಯತೆ ಇದೆ ಎಂದು ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ತಡೆಗೋಡೆ ಕುಸಿದರೆ ದೊಡ್ಡ ಪ್ರಮಾಣದ ಸಾವು-ನೋವು ಸಂಭವಿಸುವ ಭೀತಿ ಕೂಡಾ ಇಲ್ಲಿ ಎದುರಾಗಿದೆ.

ರಸ್ತೆ ಕುಸಿತದಿಂದ ಕೆಲವು ನಿವಾಸಿಗಳು ಮನೆಯಿಂದ ಹೊರಬರಲೂ ಸಾಧ್ಯವಾಗದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸ್ಥಳೀಯರು ತಾಲೂಕು ಆಡಳಿತ ಹಾಗೂ ನಗರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ತಕ್ಷಣ ಶಾಶ್ವತ ಪರಿಹಾರ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಇದೀಗ ಜನರ ನರಳಾಟಕ್ಕೆ ತಾಲೂಕು ಆಡಳಿತ ಯಾವ ರೀತಿಯಲ್ಲಿ ಸ್ಪಂದಿಸಲಿದೆ ಎನ್ನುವುದನ್ನು ಕಾದು ನೋಡಬೇಕಾಗಿದೆ.