ಕಾರವಾರ: ಪೀಠಾಧಿಪತಿಯೇ ಇಲ್ಲದ ಮಠದಲ್ಲಿ ಚಾತುರ್ಮಾಸ ಆಚರಣೆ ನಡೆಸುವುದು ಧಾರ್ಮಿಕ ಸಂಪ್ರದಾಯಗಳಿಗೆ ವಿರುದ್ಧವಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಅಜಿತ್ ಪೊಕಳೆ ಆಕ್ಷೇಪ ವ್ಯಕ್ತಪಡಿಸಿ, ಕೂಡಲೇ ಹಳದಿಪುರ ವಾಮನಾಶ್ರಮ ಮಠದಲ್ಲಿ ಕೈಗೊಳ್ಳುವ ಚಾತುರ್ಮಾಸ ಸ್ಥಗಿತಕ್ಕೆ ಆಗ್ರಹಿಸಿದ್ದಾರೆ.
ಕಾರವಾರದ ಪತ್ರಿಕಾಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಪೊಕಳೆ, ಗುರುಗಳ ನೇರ ಉಪಸ್ಥಿತಿ ಇಲ್ಲದೆ ಕಾರ್ಯಕ್ರಮ ನಡೆಸುವುದು ಸನಾತನ ಧರ್ಮದ ಆಚರಣೆಗೆ ಹೊಂದಿಕೆಯಾಗುವುದಿಲ್ಲ. ಜುಲೈ 29ರಂದು ಹಳದಿಪುರ ಮಠದಲ್ಲಿ ಆಯೋಜಿಸಲು ಉದ್ದೇಶಿಸಿರುವ ಚಾತುರ್ಮಾಸ ಕಾರ್ಯಕ್ರಮ ಧಾರ್ಮಿಕ ವಿಧಿ ವಿಧಾನಕ್ಕೆ ವಿರುದ್ಧ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇನ್ನು ಹಳದಿಪುರದ ಕೃಷ್ಣಾಶ್ರಮ ಮಠದ ಸ್ವಾಮೀಜಿಗಳ ವಿರುದ್ಧ ಹಣಕಾಸು ಹಾಗೂ ಸ್ಥಿರಾಸ್ತಿ ನಿರ್ವಹಣೆಯಲ್ಲಿ ಅಕ್ರಮ ನಡೆಸಿದ್ದಾರೆ ಎಂದು ಆರೋಪಿಸಿದ ಪೊಕಳೆ, ಪ್ರಕರಣದ ಕುರಿತು ಉನ್ನತ ಮಟ್ಟದ ತನಿಖೆ ನಡೆಸುವಂತೆ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಮಠದ ವ್ಯವಹಾರಕ್ಕೆ ಸಂಬಂಧಿಸಿದಂತೆ ಪ್ರಶ್ನೆಯೆತ್ತಿದ ತನ್ನ ಮೇಲೆ ಮಠದ ಆವರಣದಲ್ಲೇ ಹಲ್ಲೆಯಾಗಿತ್ತು. ಈ ಬಗ್ಗೆ ಪೋಲಿಸ್ ದೂರು ದಾಖಲಿಸಿದರೂ, ತನಿಖೆಯಲ್ಲಿ ಯಾವುದೇ ಪ್ರಗತಿಯಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ತನ್ನ ಮೇಲಿನ ಹಲ್ಲೆ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದರೂ, ಹಲ್ಲೆ ಆರೋಪಿಗಳನ್ನು ಗುರುತಿಸಲು ಪೋಲಿಸರು ವಿಫಲರಾಗಿದ್ದಾರೆಂದು ಆರೋಪಿಸಿದರು.
ಮಠದ ಆವರಣದಲ್ಲಿ ನಡೆಯುತ್ತಿರುವ ಪ್ರಾಥಮಿಕ ಶಾಲೆಯ ನಿರ್ವಹಣೆಯಲ್ಲೂ ಗೊಂದಲ ಉಂಟಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಹಿತದೃಷ್ಟಿಯಿಂದ ಶಾಲೆಯನ್ನು ತಕ್ಷಣವೇ ಹೊನ್ನಾವರದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ವಿಲೀನಗೊಳಿಸಬೇಕು ಎಂದು ಮುಖ್ಯಮಂತ್ರಿ, ಶಿಕ್ಷಣ ಸಚಿವರು ಹಾಗೂ ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಮನವಿ ಮಾಡಿದರು.
