Karwar| ಲೋಕಸಭೆಯಲ್ಲಿ ಮೂರನೇ ಎರಡು ಬಹುಮತ ತನ್ನಲ್ಲಿಲ್ಲ ಎಂಬುದು ಬಿಜೆಪಿಗೆ ಗೊತ್ತಿದ್ದೂ ಮಹಿಳಾ ಮೀಸಲಾತಿ ವಿಧೇಯಕವನ್ನು ಸಂಸತ್ತಿನಲ್ಲಿ ಮಂಡಿಸಿರುವ ಹಿಂದೆ ಮುಂಬರುವ ಚುನಾವಣೆಗಳಲ್ಲಿ ಮಹಿಳೆಯರ ಮತ ಸೆಳೆಯುವ ಕುತಂತ್ರ ಎಂದು ಕೆಪಿಸಿಸಿ ಜಿಲ್ಲಾ ವಕ್ತಾರ ಕೆ.ಶಂಭು ಶೆಟ್ಟಿ ಟೀಕಿಸಿದ್ದಾರೆ.

ಎನ್.ಡಿ.ಎ ಮೈತ್ರಿಕೂಟಕ್ಕೆ ಸಂಸತ್ತಿನಲ್ಲಿ
ಮೂರನೇ ಎರಡು ಬಹುಮತ ಇಲ್ಲ ಎಂಬುದು ಬಿಜೆಪಿಗೆ ತಿಳಿಯದ ವಿಷಯವೆನಲ್ಲ. ಆದರೂ ಮುಂಬರುವ ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ಮತ್ತಿತರ ರಾಜ್ಯಗಳಲ್ಲಿ ವಿಧಾನ ಸಭಾ ಚುನಾವಣೆ ಹತ್ತಿರದಲ್ಲಿದ್ದು, ಈ ಚುನಾವಣೆ ಗಳಲ್ಲಿ ಮಹಿಳೆಯರ ಬೆಂಬಲ ಪಡೆಯುವ ತಂತ್ರಗಾರಿಕೆಯೇ ಮಸೂದೆ ಮಂಡನೆ ಹಿಂದಿನ ರಹಸ್ಯ ಎಂದು ವ್ಯಂಗವಾಡಿದ್ದಾರೆ.

2023 ರಲ್ಲಿ ಮಹಿಳಾ ಮೀಸಲಾತಿ ವಿಧೇಯಕವನ್ನು ಕಾಂಗ್ರೆಸ್ ಪಕ್ಷ ಸೇರಿದಂತೆ ಎಲ್ಲಾ ಪಕ್ಷದವರೂ ಒಟ್ಟು ಸೇರಿ ಸರ್ವಾನುಮತದಿಂದ ಅಂಗೀಕರಿಸಿ “ನಾರಿ ಶಕ್ತಿವಂದನ್ ಅಧಿನಿಯಮ “ಎಂಬ ಹೆಸರಿನಲ್ಲಿ ಕಾನೂನಾಗಿ ಮಾರ್ಪಾಟು ಮಾಡಿದ್ದರು. ಆದರೆ ಅದರಲ್ಲಿ ಮುಂದೆ ನಡೆಯಲಿರುವ ಜನಗಣತಿಯ ಆಧಾರದಲ್ಲಿ ಕ್ಷೇತ್ರಗಳ ಮರುವಿಂಗಡಣೆ ಆದನಂತರ ಈ ಕಾನೂನನ್ನು ಅನುಷ್ಠಾನ ಗೊಳಿಸತಕ್ಕದ್ದು ಎಂಬ ಷರತ್ತು ಹೇರಲಾಗಿತ್ತು. 2026 ರಲ್ಲಿ ದೇಶದ ಜನಗಣತಿ ನಡೆಯಲಿದ್ದು, ಅದರ ಆಧಾರದಲ್ಲಿ ಕ್ಷೇತ್ರ ಮರುವಿಂಗಡಣೆ ನಡೆದು ಮಹಿಳೆಯರಿಗೆ 33% ಮೀಸಲಾತಿ ದೊರೆಯಬಹುದು ಎಂದು ಎಲ್ಲರೂ ಭಾವಿಸಿದ್ದರು. ಆದರೆ ಬಿಜೆಪಿ ಇದರಲ್ಲೂ ರಾಜಕೀಯ ಲಾಭಗಳಿಸುವ ತಂತ್ರಗಾರಿಕೆ ನಡೆಸಿ 2026 ಜನಗಣತಿಗೆ ಕಾಯದೆ 2011 ರ ಜನಗಣತಿಯನ್ನು ಆಧಾರವಾಗಿಟ್ಟು, ಕ್ಷೇತ್ರ ಮರು ವಿಂಗಡಣೆ ಮಾಡಿ ಮಹಿಳೆಯರಿಗೆ ಮೀಸಲಾತಿ ನೀಡುವ ಆಸೆ ತೋರಿಸಿ ಮುಂಬರುವ ಕೆಲ ರಾಜ್ಯಗಳ ವಿಧಾನ ಸಭಾ ಚುನಾವಣೆಗಳಲ್ಲಿ ಜಯಗಳಿಸುವ ಹುನ್ನಾರ ಈ ನಿರ್ಧಾರದ ಹಿಂದೆ ಅಡಗಿತ್ತು ಎಂದು ಆರೋಪಿಸಿದರು.

ಇದರ ಜೊತೆ ಜೊತೆಗೆ ಯಾವುದೇ ಪೂರ್ವ ತಯಾರಿ ಮಾಡದೆ ಸಂಸತ್ ನಲ್ಲಿ ಕ್ಷೇತ್ರ ಮರು ವಿಂಗಡಣೆ ಮಸೂದನೆಯನ್ನೂ ಮಂಡನೆ ಮಾಡಲಾಗಿತ್ತು. ಬಿಜೆಪಿಗೆ ಮಹಿಳಾ ಮೀಸಲಾತಿಯಲ್ಲಿ ಆಸಕ್ತಿ ಇದ್ದಿದ್ದರೆ 2023 ರಲ್ಲಿ ತನಗೆ ಸಂಸತ್ತಿನಲ್ಲಿ 2/3 ರಷ್ಟು ಬಹುಮತ ಇದ್ದಾಗ 2011ರ ಜನಗಣತಿ ಆಧಾರದ ಮೇಲೆ ಕ್ಷೇತ್ರ ಮರುವಿಂಗಡಣೆ ಮಾಡಿ ಮಹಿಳಾ ಮೀಸಲಾತಿ ಕಾನೂನನ್ನು ಅನುಷ್ಠಾನ ಮಾಡಬಹುದಿತ್ತು. ಆದರೆ ಆಗ ಬಿಜೆಪಿಗೆ ಇದರ ಅಗತ್ಯ ಇರಲಿಲ್ಲ.

ಈಗ ಮುಂಬರುವ ವಿಧಾನಸಭಾ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಮಸೂದೆ ಪಾಸ್ ಆದರೂ ಬಿದ್ದರೂ ತಮಗೆ ಮಹಿಳೆಯರ ಬೆಂಬಲ ದೊರೆಯುತ್ತದೆ ಎಂಬ ಸ್ವಾರ್ಥ ಉದ್ದೇಶ ದೊಂದಿಗೆ ಬಿಜೆಪಿ ಈ ಮಸೂದೆಯನ್ನು ಸಂಸತ್ತಿನಲ್ಲಿ ಮಂಡನೆ ಮಾಡುವ ಹುಚ್ಚು ಧೈರ್ಯ ಮಾಡಿತ್ತು ಎಂದು ಕಾಂಗ್ರೆಸ್ ವಕ್ತಾರ ಕೆ.ಶಂಭು ಶೆಟ್ಟಿ ಆರೋಪಿಸಿದ್ದಾರೆ.