Shivmoga| ಬುರ್ಖಾ ಧರಿಸಿ ತನ್ನ ಪ್ರೇಯಸಿಯನ್ನು ಭೇಟಿ ಮಾಡಲು ಬಂದ ಯುವಕನೊಬ್ಬನನ್ನು ಮಕ್ಕಳ ಕಳ್ಳನೆಂದು ಭ್ರಮಿಸಿದ ಸ್ಥಳೀಯರು, ಆತನಿಗೆ ಧರ್ಮದೇಟು ನೀಡಿದ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಜನ್ನತ್ ನಗರದಲ್ಲಿ ನಡೆದಿದೆ.
ಸಾಗರ ತಾಲೂಕಿನ ತ್ಯಾಗರ್ತಿ ಗ್ರಾಮದ ಯುವಕನೋರ್ವ ತನ್ನ ಪ್ರೇಯಸಿಯನ್ನು ಭೇಟಿ ಮಾಡುವ ಉದ್ದೇಶದಿಂದ ಬುರ್ಖಾ ಧರಿಸಿ ಬಂದಿದ್ದ. ಆದರೆ, ಆತನ ವೇಷಭೂಷಣ ಮತ್ತು ಅಸಹಜ ನಡವಳಿಕೆ ಸ್ಥಳೀಯರ ಗಮನ ಸೆಳೆದಿದೆ.

ಈಗಾಗಲೇ ಮಕ್ಕಳ ಕಳ್ಳರ ಕುರಿತು ಸುದ್ದಿ ಹರಿದಾಡುತ್ತಿರುವ ಹಿನ್ನೆಲೆ ಜನರು ಆತಂಕಗೊಂಡಿದ್ದರಿಂದ, ಈ ಯುವಕನನ್ನು ಮಕ್ಕಳ ಕಳ್ಳನೆಂದು ತಪ್ಪಾಗಿ ಭಾವಿಸಿದ್ದರು. ಹೀಗಾಗಿ ಸ್ಥಳೀಯರು ಯುವಕನನ್ನು ಹಿಡಿದು ಕಂಬಕ್ಕೆ ಕಟ್ಟಿ ಭರ್ಜರಿ ಧರ್ಮದೇಟು ನೀಡಿದ್ದಾರೆ. ಈ ಘಟನೆ ಸ್ಥಳದಲ್ಲಿ ಕೆಲವು ಕಾಲ ಆತಂಕದ ವಾತಾವರಣ ಸೃಷ್ಟಿಸಿತ್ತು. ಅದಾಗಲೇ ಸ್ಥಳೀಯರಿಂದ ಮಾಹಿತಿ ಪಡೆದು ಓಡೋಡಿ ಬಂದ ನಗರ ಪೊಲೀಸರು, ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ವಿಚಾರಣೆಯ ವೇಳೆ ಯುವಕ, ತಾನು ಪ್ರೇಯಸಿಯನ್ನು ಭೇಟಿ ಮಾಡಲು ಬುರ್ಖಾ ಧರಿಸಿ ಬಂದಿದ್ದೆ ಎಂದು ಹೇಳಿದ್ದಾನೆ. ಮಕ್ಕಳ ಕಳ್ಳನೆಂದು ಭಾರೀ ಗಂಭೀರವಾಗಿದ್ದ ಜನರು ಯಾವಾಗ ಪೊಲೀಸ್ ಮೂಲದಿಂದ ಈ ಯುವಕ ಕಿಲಾಡಿ ಪ್ರೇಮಿ ಎಂಬ ಸತ್ಯಾಂಶ ಅರಿತುಕೊಂಡರೋ ಗೊಳ್ಳೆಂದು ನಕ್ಕಿದ್ದಾರೆ. ಅಲ್ಲದೇ, ಆತ ಬುರ್ಕಾ ಧರಿಸಿ ಯಾವ ಯುವತಿಗಾಗಿ ವೇಷ ಮರೆಸಿಕೊಂಡು ಬಂದನೋ, ಆ ಯುವತಿ ಯಾರು ಅಂತಾ ಜನರೇ ಹುಡುಕಾಡತೊಡಗಿದ್ದಾರೆ.
