Sirsi|Marikamba Jatra|
ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಡೆಯುವ ರಾಜ್ಯದ ಅತಿದೊಡ್ಡ ಜಾತ್ರೆಗಳಲ್ಲೊಂದು ಎಂಬ ಖ್ಯಾತಿ ಪಡೆದಿರುವ ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವ ಇಂದಿನಿಂದ ಅದ್ಧೂರಿಯಾಗಿ ಆರಂಭಗೊಂಡಿದೆ.

ಶಿರಸಿಯ ದೇವಾಲಯದಿಂದ ಬಸ್ ನಿಲ್ದಾಣದ ಬಳಿಯ ಬಿಡಕ್ಕಿ ಬೈಲಿನಲ್ಲಿರುವ ಜಾತ್ರಾ ಗದ್ದುಗೆಯತ್ತ ಭವ್ಯ ಮೆರವಣಿಗೆಯೊಂದಿಗೆ ತೆರಳಿದ ತಾಯಿ ಶ್ರೀ ಮಾರಿಕಾಂಬೆ, ಧಾರ್ಮಿಕ ಕೈಂಕರ್ಯದ ಜತೆ ಭಕ್ತರ ಜಯಘೋಷ, ನಾಮಜಪದೊಂದಿಗೆ ಗದ್ದುಗೆಯಲ್ಲಿ ವಿರಾಜಮಾನಳಾಗಿದ್ದಾಳೆ.
ಸುಮಾರು 30 ಅಡಿ ಎತ್ತರದ ಬೃಹತ್ ರಥದಲ್ಲಿ ವಿರಾಜಮಾನಳಾಗಿ, ದೇವಸ್ಥಾನದಿಂದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದ ದೇವಿಯ ರಥವನ್ನು ಲಕ್ಷಾಂತರ ಭಕ್ತರು ಭಕ್ತಿಭಾವದಿಂದ ಎಳೆದು ಸಂಭ್ರಮಿಸಿದರು. ರಥ ಮೆರವಣಿಗೆಯ ಮುಂಭಾಗದಲ್ಲಿ ಡೊಳ್ಳು, ನಗಾರಿ, ಕುಣಿತ ಭಜನೆ, ನಾಸಿಕ್ ಬ್ಯಾಂಡ್ ಸೇರಿದಂತೆ ವಿವಿಧ ವಾದ್ಯಗೋಷ್ಠಿಗಳು ಭಕ್ತರ ಹೆಜ್ಜೆಗೆ ಲಯಬದ್ಧ ಸಾಥ್ ನೀಡಿದವು.

ದೇವಿಗೆ ಹರಕೆಗಾಗಿ ತಂದ ಕೋಳಿ ಹಾಗೂ ಬಾಳೆಹಣ್ಣುಗಳನ್ನು ಭಕ್ತರು ಅರ್ಪಿಸಿ ತಮ್ಮ ಭಕ್ತಿಯನ್ನು ವ್ಯಕ್ತಪಡಿಸಿದರು. ಅಲ್ಲದೇ, ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ತಾಯಿಯಲ್ಲಿ ಕೋರಿಕೊಂಡರು.
ಇಂದಿನಿಂದ ಒಂಭತ್ತು ದಿನಗಳ ಕಾಲ ಶಿರಸಿ ಮಾರಿಕಾಂಬೆಯ ಅದ್ಧೂರಿ ಜಾತ್ರೋತ್ಸವ ನಡೆಯಲಿದ್ದು, ಗದ್ದುಗೆಯಲ್ಲಿ ದೇವಿಯನ್ನು ಪ್ರತಿಷ್ಠಾಪಿಸಿದ ನಂತರ ಪ್ರತೀ ದಿನ ವಿಶೇಷ ಪೂಜೆ, ಪುನಸ್ಕಾರಗಳು ನೆರವೇರಲಿವೆ. ಸಂಪ್ರದಾಯದಂತೆ ಬೂದು ಕುಂಬಳಕಾಯಿಗೆ ಬಲಿ ನೀಡಿದ ಬಳಿಕ ದೇವಿಯನ್ನು ಗದ್ದುಗೆಯಲ್ಲಿ ಕೂರಿಸಿ ಪೂಜಾ ಕೈಂಕರ್ಯಗಳು ಆರಂಭಿಸಲಾಯಿತು.

ರಾಜ್ಯದ ವಿವಿಧ ಭಾಗಗಳಿಂದ ಮಾತ್ರವಲ್ಲದೆ ದೇಶ-ವಿದೇಶಗಳಿಂದಲೂ ಭಕ್ತರು ಶಿರಸಿಗೆ ಆಗಮಿಸುತ್ತಿದ್ದಾರೆ. ನಗರದಲ್ಲಿ ಭಕ್ತರ ಸಂಖ್ಯೆಯ ಹೆಚ್ಚಳದಿಂದ ರಸ್ತೆಗಳು ತುಂಬಿ ತುಳುಕುತ್ತಿದ್ದವು. ಯಾವುದೇ ಅವಘಡ ಸಂಭವಿಸದಂತೆ ಪೊಲೀಸರು ಕಟ್ಟುನಿಟ್ಟಿನ ಬಂದೋಬಸ್ತ್ ಏರ್ಪಡಿಸಿದ್ದಾರೆ.

ಭಕ್ತಿಭಾವ, ಸಂಭ್ರಮ ಮತ್ತು ಸಂಪ್ರದಾಯದ ವೈಭವದಿಂದ ಶ್ರೀ ಮಾರಿಕಾಂಬೆ ಜಾತ್ರಾ ಮಹೋತ್ಸವ ಆರಂಭಗೊಂಡಿದ್ದು, ಮುಂದಿನ ಒಂಬತ್ತು ದಿನಗಳ ಕಾಲ ಶಿರಸಿ ನಗರ ಭಕ್ತಿಸಾಗರದಲ್ಲಿ ಮುಳುಗಲಿದೆ.
