Karwar| ಗ್ರಾಹಕರಿಗೆ ಅಡುಗೆ ಅನಿಲ ಸಮರ್ಪಕವಾಗಿ ಪೂರೈಸದ ಇಲ್ಲಿನ ಜನತಾ ಬಜಾರ್ ಗ್ಯಾಸ್ ಏಜೆನ್ಸಿಯವರ ‘ಕಳ್ಳಾಟ’ಕ್ಕೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ‘ಬ್ರೇಕ್’ ಹಾಕಿದ ಘಟನೆ ನಡೆದಿದೆ.

ಮಧ್ಯಪ್ರಾಚ್ಯ ಬಿಕ್ಕಟ್ಟು ಅಡುಗೆ ಅನಿಲ ಪೂರೈಕೆ ಮೇಲೆ ವ್ಯಾಪಕ ಪರಿಣಾಮ ಬಿರಿದ್ದು, ದಿನದಿಂದ‌ ದಿನಕ್ಕೆ ಸಮಸ್ಯೆ ಬಿಗಡಾಯಿಸುತ್ತಿದೆ. ಆದರೆ ಇದನ್ನೆ ಬಂಡವಾಳ ಮಾಡಿಕೊಂಡ ಕೆಲ ಅಡುಗೆ ಅನಿಲ ವಿತರಕರು ‘ಬೆಂಕಿ ಬಿದ್ದ ಮನೆಯಲ್ಲಿ‌ ಬೀಡಿ ಹಂಚಿಕೊಂಡರು’ ಎಂಬಂತೆ ಗ್ರಾಹಕರಿಗೆ ಸರಿಯಾಗಿ ಸಿಲೆಂಡರ್ ವಿತರಿಸುವುದು ಬಿಟ್ಟು ಹಣ ಮಾಡುವ ದಂಧೆಯಾಗಿ ಮಾಡಿಕೊಂಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಕಾರವಾರದ ಜನತಾ ಬಜಾರ್ ಗ್ಯಾಸ್ ಏಜೆನ್ಸಿಯಲ್ಲಿಯೂ ಸಹ ಗ್ರಾಹಕರಿಗೆ ಅಡುಗೆ ಅನಿಲ ಸಮರ್ಪಕ ವಿತರಣೆ ಮಾಡದೇ ಕಳ್ಳಾಟ ನಡೆಯುತ್ತಿತ್ತು‌ ಎನ್ನಲಾಗಿದೆ. ಈ ಬಗ್ಗೆ ಕೆಲವರು ನೇರವಾಗಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಗಮನಕ್ಕೆ ತಂದಿದ್ದರು.

ಕೂಡಲೇ ಸಂಸದ ಕಾಗೇರಿಯವರು ಜನತಾ ಬಜಾರ್ ನಲ್ಲಿ ಗ್ರಾಹಕರಿಗೆ ಅಡುಗೆ ಅನಿಲ ಸರಿಯಾಗಿ ವಿತರಣೆಯಾಗುತ್ತಿರುವ ಬಗ್ಗೆ ಪರಿಶೀಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ. ಆಗ ಡಿಸಿಯವರು ನೇರವಾಗಿ ಪೆಟ್ರೋಲಿಯಂ ಕಾರ್ಪೊರೇಷನ್ ‌ಅಧಿಕಾರಿಗಳಿಗೆ‌ ಜನತಾ ಬಜಾರ್ ಗ್ಯಾಸ್ ಏಜೆನ್ಸಿಯವರ ಸ್ಟಾಕ್ ಪರಿಶೀಲನೆಗೆ ಆದೇಶಿಸಿದ್ದಾರೆ.

ಆಗ ಜನತಾ ಬಜಾರ್ ಏಜೆನ್ಸಿಯವರ ಸ್ಟಾಕ್ ಪರಿಶೀಲಿಸಿದ ಪೆಟ್ರೋಲಿಯಂ ಕಾರ್ಪೊರೇಷನ್ ಅಧಿಕಾರಿಗಳು ಬೆಚ್ಚಿಬಿದ್ದಿದ್ದಾರೆ. ಏಕೆಂದರೆ ಸಿಲೆಂಡರ್ ಬುಕ್ಕಿಂಗನ್ನು ಮೊಬೈಲ್ ಬುಕಿಂಗ್, ಆ್ಯಪ್ ಬುಕಿಂಗ್ ಮೂಲಕ ಸ್ವೀಕರಿಸದೇ, ಮಾನ್ಯುಯಲ್ ವಿಧಾನದಲ್ಲಿ ಓಬೆರಾಯನ ಕಾಲದ ವ್ಯವಸ್ಥೆಯಲ್ಲಿ ನಡೆಸಲಾಗುತ್ತಿತ್ತು. ಇದರಿಂದ ತಮಗೆ ಬೇಕಾದವರಿಗೆ ಸಿಲೆಂಡರ್ ನೀಡುತ್ತಿರುವುದು ಬೆಳಕಿಗೆ ಬಂದಿದೆ.

ಗ್ರಾಹಕರಿಗೆ ಕೂಡಲೇ ಸಮರ್ಪಕವಾಗಿ ಸಿಲೆಂಡರ್ ಪೂರೈಸುವಂತೆ ಜನತಾ ಬಜಾರ್ ಸೊಸೈಟಿ ಯವರಿಗೆ ಅಧಿಕಾರಿಗಳು ತಾಕೀತು ಮಾಡಿದ್ದಾರೆ.
ಅಲ್ಲದೇ ಈ ಬಗ್ಗೆ ಜನತಾ ಬಜಾರ್ ಗ್ಯಾಸ್ ಏಜೆನ್ಸಿಗೆ ಪೆಟ್ರೋಲಿಯಂ ಕಾರ್ಪೊರೇಷನ್ ವತಿಯಿಂದ ಶೋಕಾಸ್ ನೋಟಿಸ್ ಸಹ ಜಾರಿಗೊಳಿಸಲಾಗಿದೆ ಎನ್ನಲಾಗಿದೆ.