Bhatkal: ಉತ್ತರಕನ್ನಡ ಜಿಲ್ಲೆಗೆ ರಾಜ್ಯ ಬಜೆಟ್ನಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಘೋಷಣೆಯಾದ ಬೆನ್ನಲ್ಲೇ ಮೀನುಗಾರಿಕೆ ಮತ್ತು ಬಂದರು ಸಚಿವ ಮಂಕಾಳು ವೈದ್ಯ ಅವರ ಪುತ್ರಿ ಬೀನಾ ವೈದ್ಯ ಸೋಶಿಯಲ್ ಮೀಡಿಯಾದಲ್ಲಿ ತನ್ನ ತಂದೆಗೆ ಕ್ರೆಡಿಟ್ ಕೊಟ್ಟು ಒಂದು ಪೋಸ್ಟ್ ಹಾಕಿದ್ದರು. ಬೀನಾ ವೈದ್ಯ ಹಾಕಿದ ಈ ಪೋಸ್ಟ್ ಜಿಲ್ಲೆಯಾದ್ಯಂತ ಭಾರೀ ಚರ್ಚಾಗ್ರಾಸವಾಗಿದ್ದು, ಜನರು ವ್ಯಂಗ್ಯವಾಗಿ ಕಮೆಂಟ್ ಹಾಕಿ ಟ್ರೋಲ್ ಮಾಡಲಾರಂಭಿಸಿದ್ದಾರೆ.
ಸರಕಾರದಿಂದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಘೋಷಣೆಯನ್ನು ತನ್ನ ತಂದೆಯ ಸಾಧನೆ, “ಶಪಥದ ಫಲ” ಎಂದು ಬೀನಾ ಬಣ್ಣಿಸಿದರೆ, ಜಿಲ್ಲೆಯ ಜನರು ಮಾತ್ರ ಆಕ್ರೋಶ ವ್ಯಕ್ತಪಡಿಸಿ, ಟ್ರೋಲ್ ಮಾಡಲಾರಂಭಿಸಿದ್ದಾರೆ.


ತಂದೆಯ ಶಪಥದ ಕಥೆ ಬಿಚ್ಚಿಟ್ಟ ಬೀನಾ:
ಶಿರೂರು ಟೋಲ್ ಬಳಿ ನಡೆದ ಭೀಕರ ಅಪಘಾತದ ಸಂದರ್ಭ ಕ್ಲಪ್ತ ಸಮಯಕ್ಕೆ ಚಿಕಿತ್ಸೆ ದೊರೆಯದೇ ಗಾಯಾಳುಗಳು ಮೃತಪಟ್ಟಿದ್ದನ್ನು ಕಂಡು ಮಂಕಾಳು ವೈದ್ಯ ಅವರು ಮನನೊಂದಿದ್ದರು. “ನಾನು ಗೆದ್ದರೆ ಜಿಲ್ಲೆಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ತರುತ್ತೇನೆ, ಇಲ್ಲದಿದ್ದರೆ ಸ್ವಂತ ಖರ್ಚಿನಲ್ಲಿ ಕಟ್ಟಿಸುತ್ತೇನೆ” ಎಂದು ಶಪಥ ಮಾಡಿದ್ದರು. ಅವರ ಆ ದೃಢ ನಿರ್ಧಾರ ಮತ್ತು ಪರಿಶ್ರಮದಿಂದಲೇ ಇಂದು ಜಿಲ್ಲೆಗೆ ಆಸ್ಪತ್ರೆ ಮಂಜೂರಾಗಿದೆ ಎಂದು ಬೀನಾ ವೈದ್ಯ ಭಾವನಾತ್ಮಕವಾಗಿ ದೊಡ್ಡ ಪೋಸ್ಟ್ ಹಾಕಿಕೊಂಡಿದ್ದಾರೆ.
ಕಮೆಂಟ್ ಬಾಕ್ಸ್ನಲ್ಲಿ ಜನರಿಂದ ಆಕ್ರೋಶ:
ಬೀನಾ ವೈದ್ಯ ಅವರ ಪೋಸ್ಟ್ಗೆ ಸಾವಿರಾರು ಕಾಮೆಂಟ್ಗಳು ಬಂದಿದ್ದು, ಬಹುತೇಕ ಜನರು ಆಸ್ಪತ್ರೆಯ ಸ್ಥಳದ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ಈ ನಡುವೆ ಕೆಲವರು “ಇದು ಬಜೆಟ್ನಲ್ಲಿ ಘೋಷಣೆಯಾದ ಸರ್ಕಾರಿ ಆಸ್ಪತ್ರೆ. ಇದನ್ನು ನಿಮ್ಮ ತಂದೆಯ ಸಾಧನೆ ಎಂದು ಬಿಂಬಿಸಿಕೊಳ್ಳುವುದು ಸರಿಯಲ್ಲ. ಕಾರವಾರದಲ್ಲಿದ್ದ ಆಸ್ಪತ್ರೆಯನ್ನೇ ಸ್ವಲ್ಪ ಉನ್ನತೀಕರಣ ಮಾಡ್ತಿದ್ದಾರೆ. ಶಾಸಕ ಸತೀಶ್ ಸೈಲ್ ಪಟ್ಟು ಬಿಡದೆ ಅವರ ತಾಲೂಕಿಗೆ ಆಸ್ಪತ್ರೆ ಮಾಡಿಕೊಂಡಿದ್ದಾರೆ. ನಮ್ಮ ಮಿನಿಸ್ಟ್ರು ಏನೂ ಮಾಡೋಕೆ ಎಂದು ಕಮೆಂಟ್ ಮಾಡಿದ್ದಾರೆ.

ಜಿಲ್ಲೆಯ ಮಧ್ಯಭಾಗದಲ್ಲಿರುವ ಕುಮಟಾ ಅಥವಾ ಹೊನ್ನಾವರದಲ್ಲಿ ಆಸ್ಪತ್ರೆಯಾದರೆ ಇಡೀ ಜಿಲ್ಲೆಯ ಜನರಿಗೆ ಸಮಾನವಾಗಿ ಹತ್ತಿರವಾಗುತ್ತಿತ್ತು. ಆದರೆ, ಕಾರವಾರದಲ್ಲಿ ಆಸ್ಪತ್ರೆ ಮಾಡುವುದರಿಂದ ಕೇವಲ ಕಾರವಾರ ಮತ್ತು ಗೋವಾ ಜನರಿಗೆ ಮಾತ್ರ ಲಾಭವಾಗುತ್ತದೆ. ಭಟ್ಕಳದಲ್ಲಿ ಅಪಘಾತವಾದ್ರೆ ಕಾರವಾರಕ್ಕೆ ಯಾಕೆ ಹೋಗ್ತಾರೆ ? ಕಾರವಾರಕ್ಕೆ ಹೋಗುವಷ್ಟರಲ್ಲಿ ಜೀವವೇ ಹೋಗಿರುತ್ತದೆ. ನಮಗೆ ಕಾರವಾರಕ್ಕೆ ಹೋಗುವ ಬದಲು ಕುಂದಾಪುರ, ಉಡುಪಿ ಅಥವಾ ಮಂಗಳೂರಿಗೆ ಹೋಗುವುದೇ ಸುಲಭ ಮತ್ತು ಹತ್ತಿರ ಎಂದು ಜನರು ಕಟುವಾಗಿ ಟೀಕಿಸಿದ್ದಾರೆ.

ಉತ್ತರಕನ್ನಡ ಜಿಲ್ಲೆಗೆ ಆಸ್ಪತ್ರೆ ಮಂಜೂರಾಗಿರುವ ಖುಷಿಯ ನಡುವೆ ಜನರಿಂದ ತಾರತಮ್ಯದ ಆರೋಪವೂ ಕೇಳಿಬಂದಿದೆ. ಭಟ್ಕಳ, ಹೊನ್ನಾವರ ಮತ್ತು ಕುಮಟಾ ಭಾಗದ ರೋಗಿಗಳಿಗೆ ತುರ್ತು ಚಿಕಿತ್ಸೆಗಾಗಿ ಈಗಲೂ ಮಂಗಳೂರು ಅಥವಾ ಮಣಿಪಾಲವೇ ಅಂತಿಮ ಆಶ್ರಯತಾಣ. ಆಸ್ಪತ್ರೆ ಜಿಲ್ಲೆಯ ಎಲ್ಲಾ ಜನರಿಗೆ ತಲುಪುವಂತೆ ಭೌಗೋಳಿಕವಾಗಿ ಮಧ್ಯಭಾಗದಲ್ಲಿ ಇರಬೇಕಿತ್ತು ಎಂಬುದು ಜನರ ಅಭಿಪ್ರಾಯ ವ್ಯಕ್ತವಾದ್ರೂ ಕೆಲವರಂತೂ ಅದೆಲ್ಲಾ ಜಾಗ ಅಪ್ಪ, ಮಗಳ ಹೆಸರಲ್ಲಿದೆ. ಇಲ್ಲಿ ಆಸ್ಪತ್ರೆ ಕಟ್ಟಲು ಜಾಗ ಎಲ್ಲಿದೆ ಅಂತಾ ವ್ಯಂಗ್ಯವಾಡಿದ್ದಾರೆ.
