Karwar| Budget reactions|MLC|
ಪ್ರಸಕ್ತ ಬಜೆಟ್ ಕೇವಲ ಗ್ಯಾರಂಟಿ ಯೋಜನೆಗಳಿಗೆ ಸೀಮಿತವಾಗಿದ್ದು, ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ಕ್ಷೇತ್ರಗಳಾದ ಮೀನುಗಾರಿಕೆ, ಕೃಷಿ ಮತ್ತು ಪ್ರವಾಸೋದ್ಯಮದ ಅಭಿವೃದ್ಧಿಯನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಾರವಾರಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಘೋಷಣೆಯಾಗಿರುವುದು ಸ್ವಾಗತಾರ್ಹವಾದರೂ, ಆಸ್ಪತ್ರೆ ನಿರ್ಮಾಣಕ್ಕೆ ಮೊದಲೇ ಸೂಕ್ತ ಸ್ಥಳ ಗುರುತಿಸದಿರುವುದು ಮತ್ತು ಸದ್ಯವಿರುವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ತಜ್ಞ ವೈದ್ಯರು ಹಾಗೂ ಅತ್ಯಾಧುನಿಕ ಯಂತ್ರೋಪಕರಣಗಳ ಕೊರತೆ ಇರುವುದು ಬೇಸರದ ಸಂಗತಿಯಾಗಿದೆ. ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ಬದಲು ಕಾಂಗ್ರೆಸ್ ಸರ್ಕಾರವು ಸಾಲದ ಕೂಪಕ್ಕೆ ತಳ್ಳಿದೆ. ರಾಜ್ಯದ ಒಟ್ಟು ಸಾಲ 8.24 ಲಕ್ಷ ಕೋಟಿ ರೂಪಾಯಿಗಳ ಗಡಿ ದಾಟಿದ್ದು, ಪ್ರತಿಯೊಬ್ಬ ಕನ್ನಡಿಗನ ಮೇಲೆ ಸರಾಸರಿ 1.17 ಲಕ್ಷ ರೂಪಾಯಿಗಳ ಸಾಲದ ಹೊರೆ ಹೊರಿಸಲಾಗಿದೆ. ಸಾಲ ಮಾಡುವುದರಲ್ಲಿ ನಂಬರ್ ಒನ್ ಸ್ಥಾನದಲ್ಲಿರುವ ಈ ಸರ್ಕಾರದ ಅಭಿವೃದ್ಧಿ ಮಾತ್ರ ಶೂನ್ಯ ಎಂದು ಅವರು ಟೀಕಿಸಿದ್ದಾರೆ.
ಇನ್ನು 2024 ರಿಂದ 2027ರ ಅವಧಿಯವರೆಗೆ ಲಕ್ಷಾಂತರ ಕೋಟಿ ರೂಪಾಯಿಗಳ ಸಾಲದ ಸುರುಳಿಯನ್ನು ಸೃಷ್ಟಿಸುತ್ತಿರುವ ಮುಖ್ಯಮಂತ್ರಿಗಳ ನಡೆ ಕನ್ನಡಿಗರ ಭವಿಷ್ಯಕ್ಕೆ ಮಾರಕವಾಗಿದೆ. ಆರ್ಥಿಕ ತಜ್ಞ ಎಂದು ಕರೆಸಿಕೊಳ್ಳುವ ಸಿದ್ದರಾಮಯ್ಯನವರ ನಿಜವಾದ ಸಾಧನೆ ಜನಸಾಮಾನ್ಯರ ಮೇಲೆ ಸಾಲದ ಹೊರೆ ಹೇರಿರುವುದೇ ಆಗಿದೆ ಎಂದು ಉಳ್ವೇಕರ್ ಕಟುವಾಗಿ ಆಕ್ಷೇಪಿಸಿದ್ದಾರೆ.
