ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಇಟಗುಳಿ ಗ್ರಾಮದ ಇಡ್ತಳ್ಳಿಯಲ್ಲಿ ಬೆಚ್ಚಿಬೀಳಿಸುವ ಕೊಲೆ ಘಟನೆ ನಡೆದಿದೆ. ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಅಣ್ಣನನ್ನೇ ತಮ್ಮ ಕೊಚ್ಚಿ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ.

ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಅಣ್ಣ ಪರಮೇಶ್ವರ ಬಾಬು ನಾಯ್ಕ್ (35) ನನ್ನು ಚಿಕ್ಕಮ್ಮನ ಮಗ ಪರಮೇಶ್ವರ ತಿಮ್ಮಾ ನಾಯ್ಕ್ (27) ಕೊಲೆ ಮಾಡಿದ್ದು ಈಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಕಳೆದ ಎರಡಯ ವರ್ಷಗಳಿಂದ ಮೃತನ ಪತ್ನಿಯೊಂದಿಗೆ ಆರೋಪಿಗೆ ಅಕ್ರಮ ಸಂಬಂಧವಿತ್ತು ಎನ್ನಲಾಗಿದೆ. ಇದೇ ವಿಚಾರವಾಗಿ ಇಬ್ಬರ ನಡುವೆ ವೈಮನಸ್ಸು ಉಂಟಾಗಿತ್ತು.

ನಿನ್ನೆ ರಾತ್ರಿ “ಹೊರಗೆ ಮಾತಾಡಬೇಕು ಬಾ” ಎಂದು ಕರೆದುಕೊಂಡು ಹೋಗಿ, ಹತ್ತಿರದ ಅರಣ್ಯ ಪ್ರದೇಶದಲ್ಲಿ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ.

ಇಬ್ಬರೂ ಸಂಬಂಧದಲ್ಲಿ ಚಿಕ್ಕಮ್ಮ–ದೊಡ್ಡಮ್ಮನ ಮಕ್ಕಳಾಗಿದ್ದಾರೆ. ಘಟನಾ ಸ್ಥಳಕ್ಕೆ ಶಿರಸಿ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಪ್ರಕರಣದ ಹಿಂದೆ ಮತ್ತೆ ಯಾರ ಕೈವಾಡ ಇದೆಯಾ ಎಂದು ಪೊಲೀಸರ ತನಿಖಯಿಂದ ತಿಳಿದು ಬರಬೇಕಾಗಿದೆ.