ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ದದ ಬಿಸಿ ಭಾರತಕ್ಕೂ ತಟ್ಟಿದ್ದು, ದೇಶದಲ್ಲಿ ಅಡುಗೆ ಅನಿಲದ ಬೆಲೆಯಲ್ಲಿ ಏರಿಕೆಯಾಗಿದೆ. 14.2 ಕೆಜಿ ತೂಕದ ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ ಬೆಲೆ 60 ರೂಪಾಯಿ ಹೆಚ್ಚಳವಾಗಿದ್ದರೆ, ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಸುಮಾರು 115 ರೂಪಾಯಿ ಏರಿಕೆಯಾಗಿದೆ.

ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಮಿಲಿಟರಿ ಸಂಘರ್ಷದಿಂದಾಗಿ ಜಾಗತಿಕ ಇಂಧನ ಬೆಲೆಗಳು ಏರುತ್ತಿರುವ ಹಿನ್ನೆಲೆಯಲ್ಲಿ ಮಾರ್ಚ್ 7 ರಿಂದ ಭಾರತದಲ್ಲಿ ಈ ಪರಿಷ್ಕೃತ ದರಗಳು ಜಾರಿಗೆ ಬಂದಿವೆ.

ಇಂಡಿಯನ್ ಆಯಿಲ್ ಕಾರ್ಪೊರೇಷನ್ ಪ್ರಕಾರ, ದೆಹಲಿಯಲ್ಲಿ ಸಬ್ಸಿಡಿ ರಹಿತ ಸಿಲಿಂಡರ್ ಬೆಲೆ ₹853 ರಿಂದ ₹913 ಕ್ಕೆ ಏರಿದೆ.

ದೆಹಲಿ: ₹913
ಮುಂಬೈ: ₹912.50
ಕೋಲ್ಕತ್ತಾ: ₹939
ಚೆನ್ನೈ: ₹928.50

ಸ್ಥಳೀಯ ತೆರಿಗೆ ಮತ್ತು ವ್ಯಾಟ್ ಆಧಾರದ ಮೇಲೆ ರಾಜ್ಯದಿಂದ ರಾಜ್ಯಕ್ಕೆ ಬೆಲೆಗಳಲ್ಲಿ ವ್ಯತ್ಯಾಸವಿರುತ್ತದೆ. ಏಪ್ರಿಲ್ 2025 ರ ನಂತರ (₹50 ಏರಿಕೆ) ಇದು ಒಂದು ವರ್ಷದ ಅವಧಿಯಲ್ಲಿ ಆಗುತ್ತಿರುವ ಎರಡನೇ ಬೆಲೆ ಏರಿಕೆಯಾಗಿದೆ.

ಉಜ್ವಲ ಯೋಜನೆ ಫಲಾನುಭವಿಗಳಿಗೆ ಸಮಾಧಾನ

‘ಪ್ರಧಾನ ಮಂತ್ರಿ ಉಜ್ವಲ ಯೋಜನೆ’ ಅಡಿಯಲ್ಲಿ ಸಂಪರ್ಕ ಹೊಂದಿರುವ 10 ಕೋಟಿಗೂ ಅಧಿಕ ಕುಟುಂಬಗಳಿಗೆ ವಾರ್ಷಿಕ 12 ರೀಫಿಲ್ಗಳವರೆಗೆ ತಲಾ 300 ರೂಪಾಯಿ ಸಬ್ಸಿಡಿ ಮುಂದುವರಿಯಲಿದೆ.

ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆ
ಹೋಟೆಲ್ ಮತ್ತು ರೆಸ್ಟೋರೆಂಟ್ಗಳಲ್ಲಿ ಬಳಸುವ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ ಕೂಡ ಗಮನಾರ್ಹವಾಗಿ ಏರಿದೆ. ದೆಹಲಿಯಲ್ಲಿ ₹1,768.50 ರಿಂದ ₹1,883 ಕ್ಕೆ ಏರಿಕೆಯಾಗಿದೆ.

ಮುಂಬೈ: ₹1,835
ಕೋಲ್ಕತ್ತಾ: ₹1,990
ಚೆನ್ನೈ: ₹2,043.50ರಷ್ಟಾಗಿದೆ.

ಈ ವರ್ಷ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ಒಟ್ಟಾರೆ 300 ರೂಪಾಯಿಗೂ ಅಧಿಕ ಏರಿಕೆಯಾದಂತಾಗಿದೆ.

ಪಶ್ಚಿಮ ಏಷ್ಯಾದ ಸಂಘರ್ಷ ಮತ್ತು ತೈಲ ಪೂರೈಕೆ
ಪಶ್ಚಿಮ ಏಷ್ಯಾದಲ್ಲಿನ ಉದ್ವಿಗ್ನತೆಯಿಂದಾಗಿ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಅಸ್ಥಿರತೆ ಉಂಟಾಗಿದೆ. ವಿಶೇಷವಾಗಿ ಹಾರ್ಮುಜ್ ಜಲಸಂಧಿಯ ಸುರಕ್ಷತೆಯ ಬಗ್ಗೆ ಆತಂಕ ಸಹಃ ಮೂಡಿದೆ. ಭಾರತದ ಕಚ್ಚಾ ತೈಲ ಮತ್ತು ಎಲ್ಪಿಜಿ ಆಮದಿನ ಸುಮಾರು ಅರ್ಧದಷ್ಟು ಭಾಗವು ಇದೇ ಮಾರ್ಗದ ಮೂಲಕ ಬರುತ್ತಿತ್ತು. ಇತ್ತೀಚಿನ ಯುದ್ಧದ ಬೆಳವಣಿಗೆಗಳಿಂದ ಇರಾನ್ ಈ ಮಾರ್ಗದ ಮೂಲಕ ಸಂಚರಿಸುವ ಟ್ಯಾಂಕರ್ ಸಂಚಾರಕ್ಕೆ ಅಡ್ಡಿಪಡಿಸಿವೆ.

ದೇಶದಲ್ಲಿ ಇಂಧನ ಕೊರತೆಯಾಗಲ್ಲ : ಕೇಂದ್ರ ಸರ್ಕಾರ ಅಭಯ

ದೇಶದಲ್ಲಿ ಇಂಧನ ಕೊರತೆಯಿಲ್ಲ ಎಂದು ಕೇಂದ್ರ ಸರ್ಕಾರ ಗ್ರಾಹಕರಿಗೆ ಭರವಸೆ ನೀಡಿದೆ. ಪೆಟ್ರೋಲಿಯಂ ಸಚಿವ ಹರ್ದೀಪ ಸಿಂಗ್ ಪುರಿ ಅವರು ‘ಎಕ್ಸ್” ನಲ್ಲಿ ಪೋಸ್ಟ್ ಮಾಡಿದ್ದು, “ನಮ್ಮ ಆದ್ಯತೆ ಜನರಿಗೆ ಕೈಗೆಟುಕುವ ದರದಲ್ಲಿ ಇಂಧನ ಒದಗಿಸುವುದಾಗಿದೆ. ದೇಶದಲ್ಲಿ ಯಾವುದೇ ಇಂಧನ ಕೊರತೆ ಇಲ್ಲ, ಆತಂಕ ಬೇಡ” ಎಂದು ತಿಳಿಸಿದ್ದಾರೆ.

ಇಂಡಿಯನ್ ಆಯಿಲ್ ಕಾರ್ಪೊರೇಷನ್ ಸ್ಪಷ್ಟನೆ:

ಭಾರತದಲ್ಲಿ ಪೂರೈಕೆ ಜಾಲವು ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಪೆಟ್ರೋಲ್, ಡೀಸೆಲ್ ಕೊರತೆಯ ವದಂತಿಗಳನ್ನು ನಂಬಬೇಡಿ ಎಂದು ಹೇಳಿದೆ.

ಭಾರತದ ಬಳಿ ಪ್ರಸ್ತುತ 50 ದಿನಗಳವರೆಗೆ (25 ದಿನಗಳ ಕಚ್ಚಾ ತೈಲ ಮತ್ತು 25 ದಿನಗಳ ಸಂಸ್ಕರಿಸಿದ ತೈಲ ಉತ್ಪನ್ನಗಳು) ಸಾಕಾಗುವಷ್ಟು ಇಂಧನ ಸಂಗ್ರಹವಿದೆ. ಸುರಕ್ಷತೆಯ ದೃಷ್ಟಿಯಿಂದ ಭಾರತವು ರಷ್ಯಾ ಮತ್ತು ಅಮೆರಿಕದಂತಹ ದೇಶಗಳಿಂದ ಆಮದನ್ನು ಹೆಚ್ಚಿಸುವ ಮೂಲಕ ತನ್ನ ಪೂರೈಕೆ ಮೂಲಗಳನ್ನು ವಿಸ್ತರಿಸಿದೆ