Karwar| ‘ಇಮಾಮ್ ಸಾಬಿಗೂ ಗೋಕುಲಾಷ್ಠಮಿ’ಗೂ ಏನು‌ ಸಂಬಂಧ‌ ಎಂದರೇ, ಈಗ ಸಂಬಂಧ ಇದೆ ಎನ್ನುವಂತಾಗಿದೆ. ಏಕೆಂದರೆ ಅತ್ತ ಮುಸ್ಲಿಂ ಬಾಹುಳ್ಯದ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಇರಾನ್-ಇಸ್ರೇಲ್, ಅಮೇರಿಕಾದ ಯುದ್ಧದ ಪರಿಣಾಮ ಇತ್ತ ಇಂಡಕ್ಷನ್ ಒಲೆ ಹಾಗು ಇಲೆಕ್ಟ್ರಿಕಲ್ ಗೀಸರ್ ಗಳ ಬೇಡಿಕೆ‌ ಹೆಚ್ಚುವಂತೆ ಮಾಡಿದೆ.

ಈ ಯುದ್ಧ, ಪೆಟ್ರೋಲಿಯಂ ಉತ್ಪನ್ನಗಳ ಮೇಲೆ‌ ನೇರ ಪರಿಣಾಮ ಬೀರುತ್ತಿದೆ. ಈಗಾಗಲೇ ಅಡುಗೆ ಅನಿಲ (LPG) ದ ಬೆಲೆ ಏರಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ದರ ಏರಿಕೆಯಾಗುವ ಜತೆ, ಪೂರೈಕೆ ಸಹ ಬಾಧಿತವಾಗುವ ಸಾಧ್ಯತೆಗಳ ಬಗ್ಗೆ ಆತಂಕ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಗೃಹ ಬಳಕೆಯಲ್ಲಿ ಗ್ಯಾಸ್‌ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಜನರು ಪರ್ಯಾಯ ಮಾರ್ಗಗಳತ್ತ ಮುಖ ಮಾಡುವುದು ಅನಿವಾರ್ಯವಾಗುತ್ತಿದೆ. ಗೃಹ ಬಳಕೆಯಲ್ಲಿ ವಿದ್ಯುತ್ ಆಧಾರಿತ ಸಾಧನಗಳತ್ತ ಜನರು ಹೆಚ್ಚು ಒಲವು ತೋರುತ್ತಿದ್ದಾರೆ.

ಅಡುಗೆ ಅನಿಲದ ಬಳಕೆಯನ್ನು ಕಡಿಮೆ ಮಾಡಲು, ಹಲವರು ಈಗ ಇಂಡಕ್ಷನ್ ಒಲೆಗಳನ್ನು ಖರೀದಿಸುವತ್ತ ಮುಂದಾಗಿದ್ದಾರೆ. ಅದೇ ರೀತಿ ಬಿಸಿ ನೀರಿಗಾಗಿ ಗ್ಯಾಸ್ ಗೀಸರ್‌ಗಳ ಬದಲು ಎಲೆಕ್ಟ್ರಿಕ್ ಗೀಸರ್‌ಗಳನ್ನು ಬಳಸುವವರ ಸಂಖ್ಯೆಯೂ ನಿಧಾನವಾಗಿ ಹೆಚ್ಚುತ್ತಿದೆ.

ಕಾರವಾರ ನಗರದಲ್ಲಿನ ಇಲೆಕ್ಟ್ರಿಕಲ್ ಮತ್ತು ಪಾತ್ರೆ ಅಂಗಡಿಗಳಲ್ಲಿ ಇತ್ತೀಚಿನ ದಿನಗಳಲ್ಲಿ ಇಂಡಕ್ಷನ್ ಒಲೆ ಹಾಗೂ ಎಲೆಕ್ಟ್ರಿಕ್ ಗೀಸರ್‌ಗಳ ಬಗ್ಗೆ‌ ಗ್ರಾಹಕರಿಂದ‌ ವಿಚಾರಣೆ, ಬೇಡಿಕೆ ಹೆಚ್ಚಾಗಿದೆ ಎನ್ನುತ್ತಾರೆ ಅಂಗಡಿಯವರು. ಗ್ಯಾಸ್‌ ಬೆಲೆ ಮತ್ತಷ್ಟು ಏರಿಕೆಯ ಸಾಧ್ಯತೆಯ ಕಾರಣ ಗ್ರಾಹಕರು ಮುಂಚಿತವಾಗಿ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಒಟ್ಟಾರೆ ಮಧ್ಯಪ್ರಾಚ್ಯದ ಬಿಕ್ಕಟ್ಟು, ರಾಜ್ಯ ಕಾಂಗ್ರೆಸ್ ನ ಪಂಚ ಗ್ಯಾರಂಟಿಗಳಲ್ಲಿ ಒಂದಾದ ‘ಗೃಹಜ್ಯೋತಿ’ ಯೋಜನೆಯನ್ನು ರಾಜ್ಯದ ಜನತೆ ಇನ್ನಷ್ಟು ಪರಿಪೂರ್ಣವಾಗಿ, ಯಶಸ್ವಿಯಾಗಿ ಸದ್ಬಳಕೆ ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟದಂತೂ ಸುಳ್ಳಲ್ಲ.