ಕಾರವಾರ: ರಾಜ್ಯ ಸರ್ಕಾರದ ಸೂಚನೆಯಂತೆ ಖಾದಿ ಉಡುಪು ಬಳಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕಾರವಾರದಲ್ಲಿ ಸರ್ಕಾರಿ ನೌಕರರು ಶನಿವಾರ ಖಾದಿ ಉಡುಪು ಖರೀದಿಗೆ ವಿಶೇಷ ಉತ್ಸಾಹ ತೋರಿದರು.
ಇಂದು ಬೆಳಗ್ಗೆ ಜಿಲ್ಲಾಧಿಕಾರಿ ಕಚೇರಿಯ ಆವರಣವು ಖಾದಿ ಮಾರಾಟ ಮಳಿಗೆಯಾಗಿ ಮಾರ್ಪಟ್ಟಿತ್ತು.
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಸಂಸ್ಥೆಗಳು ಹಾಗೂ ನಿಗಮ–ಮಂಡಳಿಗಳ ಅಧಿಕಾರಿಗಳು ಮತ್ತು ನೌಕರರು ಸ್ವಯಂ ಪ್ರೇರಣೆಯಿಂದ ಪ್ರತಿ ತಿಂಗಳ ಮೊದಲ ಶನಿವಾರ ಖಾದಿ ಉಡುಪು ಧರಿಸಬೇಕೆಂದು ಸುತ್ತೋಲೆ ಹೊರಡಿಸಿದ್ದರು.
ಜಿಲ್ಲೆಯ ಸರ್ಕಾರಿ ನೌಕರರಿಗೆ ಖಾದಿ ಉಡುಪುಗಳನ್ನು ಖರೀದಿಸಲು ಅನುಕೂಲವಾಗುವಂತೆ ಹುಬ್ಬಳ್ಳಿಯ ಖಾದಿ ಹುಟ್ಟುವಳಿ ಕೇಂದ್ರದಿಂದ ಕಾರವಾರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ತಾತ್ಕಾಲಿಕ ಖಾದಿ ಮಾರಾಟ ಮಳಿಗೆಯನ್ನು ತೆರೆಯಲಾಗಿತ್ತು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೆ. ಲಕ್ಷ್ಮಿ ಪ್ರಿಯಾ ಅವರು ಮಳಿಗೆಗೆ ಭೇಟಿ ನೀಡಿ, ಸಾಂಕೇತಿಕವಾಗಿ ಸರ್ಕಾರಿ ನೌಕರರಿಗೆ ಖಾದಿ ಉಡುಪುಗಳನ್ನು ವಿತರಿಸಿ ಖಾದಿ ಬಳಕೆಯ ಮಹತ್ವವನ್ನು ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿಗಳನ್ನು ಸೇರಿದಂತೆ ವಿವಿಧ ಇಲಾಖೆಗಳ ಸರ್ಕಾರಿ ನೌಕರರು ಅತ್ಯಂತ ಉತ್ಸಾಹದಿಂದ ಖಾದಿ ಉಡುಪುಗಳನ್ನು ಖರೀದಿಸಿದರು.
ಈ ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಸಾಜೀದ್ ಮುಲ್ಲಾ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸಂಜೀವ ನಾಯ್ಕ, ಉಪಾಧ್ಯಕ್ಷ ರಮೇಶ್ ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.
