Dandeli|Boy attacked by street dog|ದಾಂಡೇಲಿ ನಗರದ ಹಳಿಯಾಳ ರಸ್ತೆಯಲ್ಲಿ ಬಾಲಕನ ಮೇಲೆ ಬೀದಿ ನಾಯಿಯೊಂದು ದಾಳಿ ನಡೆಸಿ, ಗಂಭೀರ ಗಾಯಗೊಳಿಸಿದ ಘಟನೆ ನಡೆದಿದೆ.
ಹಳಿಯಾಳ ರಸ್ತೆಯ ನಿವಾಸಿ ಶಾರುಖ್ ಸೈಯದ್ ಎಂಬಾತನೇ ಬೀದಿನಾಯಿ ದಾಳಿಗೊಳಗಾಗಿ ಗಾಯಗೊಂಡ ಬಾಲಕ. ಈತ 3ನಂ. ಗೇಟ್ ನಿಂದ ಕಾಗದ ಕಾರ್ಖಾನೆಯ ಗಾರ್ಡನ್ ಹತ್ತಿರ ಬರುತ್ತಿದ್ದ. ಈ ವೇಳೆ ಬೀದಿ ನಾಯಿಯೊಂದು ಏಕಾಏಕಿ ದಾಳಿ ನಡೆಸಿ, ಆತನಿಗೆ ಕಚ್ಚಿ ಗಾಯಗೊಳಿಸಿದೆ. ಗಾಯಗೊಂಡ ಬಾಲಕನನ್ನು ತಕ್ಷಣವೇ ದಾಂಡೇಲಿ ನಗರದಲ್ಲಿರುವ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗಿದೆ.
ದಾಂಡೇಲಿಯಲ್ಲಿ ಕಳೆದ ಒಂದೂವರೆ ವರ್ಷಗಳಿಂದ ನಗರದಲ್ಲಿ ಬೀದಿನಾಯಿಗಳ ಸಂಖ್ಯೆ ಹೆಚ್ಚಳವಾಗಿದ್ದು, ಮಕ್ಕಳು, ಹಿರಿಯರೆನ್ನದೆ ಕಚ್ಚಿ ಗಾಯಗೊಳಿಸಿದ ಪ್ರಕರಣಗಳು ಸಾಕಷ್ಟು ಬಾರಿ ನಡೆದಿವೆ. ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು.
