ಸಿಡಿಲು ಬಡಿದು ಮೂರು ಜಾನುವಾರು ಸ್ಥಳದಲ್ಲೇ ಮೃತಪಟ್ಟ ಘಟನೆ ಉತ್ತರಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನಲ್ಲಿ ನಡೆದಿದೆ.

ಭಾನುವಾರ ಸಂಜೆ ಸುಮಾರು ನಾಲ್ಕು ಗಂಟೆ ವೇಳೆಗೆ ಸಂಭವಿಸಿದ ಅವಘಡದಲ್ಲಿ ಸಿಡಿಲು ಬಡಿದು ರೋಮನ್ ಬಾವಟಿಸ್ ದಾಲ್ಮೆತ್ ಅವರಿಗೆ ಸೇರಿದ ಎರಡು ಎತ್ತುಗಳು ಹಾಗೂ ಒಂದು ಆಕಳು ಮೃತಪಟ್ಟಿವೆ ಎಂದು ತಿಳಿದು ಬಂದಿದೆ. ಘಟನೆಯಿಂದ ಪಶುಸಂಗೋಪನೆಗೆ ಅವಲಂಬಿತವಾಗಿದ್ದ ಕುಟುಂಬಕ್ಕೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.

ಇದೇ ವೇಳೆ ಭಾರೀ ಗಾಳಿ ಮಳೆಯಿಂದ ಮಂಗಳವಾಡ ಪ್ರೌಢಶಾಲೆಯ ಮೇಲ್ಚಾವಣಿಯೂ ಹಾರಿ ಹೋಗಿದ್ದು, ಶಾಲಾ ಕಟ್ಟಡಕ್ಕೆ ಹಾನಿಯಾಗಿದೆ. ಘಟನೆ ಕುರಿತು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಬಿಇಒ ಅವರ ಗಮನಕ್ಕೂ ತರಲಾಗಿದೆ ಎಂದು ಗ್ರಾಮ ಪಂಚಾಯತ್ ಅಧಿಕಾರಿಗಳು ತಿಳಿಸಿದ್ದಾರೆ.

ಸಿಡಿಲು ಹಾಗೂ ಗಾಳಿ ಮಳೆಯ ಅಬ್ಬರದಿಂದ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಹಾನಿಗೊಳಗಾದ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.